Monday, July 6, 2026

spot_img

ಅಲೆವೂರಿನ ಕೇಂದ್ರಿಯ ವಿದ್ಯಾಲಯ ಶೀಘ್ರದಲ್ಲೇ ಕೇಂದ್ರ ಸಚಿವರಿಂದ ಉದ್ಘಾಟನೆ

ಉಡುಪಿ : ಅಂದಾಜು ರೂ 28 ಕೋಟಿ ವೆಚ್ಚದಲ್ಲಿ ಅಲೇವೂರಿನಲ್ಲಿ ನಿರ್ಮಾಣಗೊಂಡಿರುವ ಕೇಂದ್ರಿಯ ವಿದ್ಯಾಲಯದ ನೂತನ ಕಟ್ಟಡವನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕೇಂದ್ರ ಸರ್ಕಾರದ ಸಚಿವರ ಉಪಸ್ಥಿತಿಯಲ್ಲಿ ಕಟ್ಟಡವನ್ನು ಉದ್ಘಾಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದರು ತಿಳಿಸಿದರು. ಈ ನೂತನ ಕಟ್ಟಡವು ಜಿಲ್ಲೆಯ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವುದರೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಲಿದೆ ಎಂದು ಅವರು ಹೇಳಿದರು.

ಪರಿಶೀಲನೆ ವೇಳೆ ಸಂಸದರು ಶಾಲೆಯ ವಿವಿಧ ತರಗತಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಾಲೆಯಲ್ಲಿನ ಕಲಿಕಾ ವಾತಾವರಣ, ವಿದ್ಯಾರ್ಥಿಗಳ ಯೋಗಕ್ಷೇಮ, ಶೈಕ್ಷಣಿಕ ಚಟುವಟಿಕೆಗಳು ಹಾಗೂ ಮೂಲಸೌಕರ್ಯಗಳ ಕುರಿತು ಮಾಹಿತಿ ಪಡೆದರು.

ಪ್ರಸ್ತುತ ಶಾಲೆಯಲ್ಲಿ 1ರಿಂದ 10ನೇ ತರಗತಿಯವರೆಗೆ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದೇ ಶೈಕ್ಷಣಿಕ ವರ್ಷದಿಂದ 1ರಿಂದ 5ನೇ ತರಗತಿವರೆಗೆ ಹೆಚ್ಚುವರಿ ವಿಭಾಗಗಳಿಗೆ ಅನುಮೋದನೆ ದೊರೆತಿದ್ದು, ಹೊಸ ತರಗತಿಗಳೂ ಆರಂಭಗೊಂಡಿವೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕೇಂದ್ರಿಯ ವಿದ್ಯಾಲಯಕ್ಕೆ ದಾಖಲಿಸಿ ಈ ಸೌಲಭ್ಯದ ಪ್ರಯೋಜನ ಪಡೆಯುವಂತೆ ಸಂಸದರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಭಾರ ಪ್ರಾಂಶುಪಾಲರು ಮಣಿಪಾಲದಿಂದ ಅಲೇವೂರಿನ ಕೇಂದ್ರಿಯ ವಿದ್ಯಾಲಯದವರೆಗೆ ಬಸ್ ವ್ಯವಸ್ಥೆ, ಜನರೇಟರ್ ವ್ಯವಸ್ಥೆ, ಮೇಲ್ಛಾವಣಿ ಕಾಮಗಾರಿ ಹಾಗೂ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಸಂಸದರಿಗೆ ಮನವಿ ಸಲ್ಲಿಸಿದರು. ಈ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಆದ್ಯತೆಯ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಂಸದರು ಭರವಸೆ ನೀಡಿದರು.

ಪರಿಶೀಲನೆ ಸಂದರ್ಭದಲ್ಲಿ ಕೇಂದ್ರಿಯ ವಿದ್ಯಾಲಯದ ಪ್ರಭಾರ ಪ್ರಾಂಶುಪಾಲರು, ಸಿಬ್ಬಂದಿ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಯ ಇಂಜಿನಿಯರ್ ಸೇರಿದಂತೆ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles