ಉಡುಪಿ : ಭಾರಿ ಮಳೆ ಹಾಗೂ ಭೂಕುಸಿತದ ಆತಂಕದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 169ಎರ ಆಗುಂಬೆ ಘಾಟಿ ಮಾರ್ಗದಲ್ಲಿ ಸೆಪ್ಟೆಂಬರ್ 30ರವರೆಗೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ. ತೀರ್ಥಹಳ್ಳಿ-ಮಲ್ಪೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ಎರ ಆಗುಂಬೆ ಘಾಟಿ ಪ್ರದೇಶದಲ್ಲಿ ನಿರಂತರ ಮಳೆಯ ಕಾರಣ ರಸ್ತೆ ಬದಿಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿ 1989ರ ಕಲಂ 221(ಎ)(2) ಮತ್ತು (5)ರ ಅನ್ವಯ ಈ ಆದೇಶ ಜಾರಿಗೊಳಿಸಲಾಗಿದೆ. ಆದೇಶದಂತೆ ಆಗುಂಬೆ ಘಾಟಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ ಸಂಚರಿಸುವ ಭಾರಿ ವಾಹನಗಳು ತೀರ್ಥಹಳ್ಳಿ-ನಗರ-ಕುಂದಾಪುರ-ಉಡುಪಿ ಮಾರ್ಗವಾಗಿ ಸಂಚರಿಸಬೇಕು. ಚಿಕ್ಕಮಗಳೂರಿನಿಂದ ಉಡುಪಿ ಕಡೆಗೆ ಬರುವ ವಾಹನಗಳು ಬಾಳೆಹೊನ್ನೂರು-ಮಾಗುಂಡಿ-ಕಳಸ-ಕುದುರೆಮುಖ-ಎಸ್.ಕೆ. ಬಾರ್ಡರ್ ಮಾರ್ಗವನ್ನು ಬಳಸಬೇಕು.

ಅದೇ ರೀತಿ ನರಸಿಂಹರಾಜಪುರದಿಂದ ಉಡುಪಿ ಕಡೆಗೆ ಬರುವ ವಾಹನಗಳು ಕೊಪ್ಪ-ಜಯಪುರ-ಬಾಳೆಹೊಳೆ-ಕಳಸ-ಕುದುರೆಮುಖ-ಎಸ್.ಕೆ. ಬಾರ್ಡರ್ ಮಾರ್ಗವಾಗಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


