ಉಡುಪಿ : ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮದ ರಾಯಭಾರಿಯಾಗಿ ‘ಕಾಂತಾರ’ ಖ್ಯಾತಿಯ ನಟ ರಿಷಬ್ ಶೆಟ್ಟಿ ಅವರನ್ನು ಆಯ್ಕೆ ಮಾಡಿರುವ ಕ್ರಮವನ್ನು ಕೈಬಿಡಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಸದಸ್ಯ ಜಯಶೆಟ್ಟಿ ಬನ್ನಂಜೆ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಸಂಯೋಜಕ ಗಣೇಶ್ ರಾಜ್ ಸರಳೆಬೆಟ್ಟು, ರಿಷಬ್ ಶೆಟ್ಟಿ ಅವರ ಆಯ್ಕೆ ಪ್ರಕ್ರಿಯೆಯನ್ನು ಖಂಡಿಸಿದ್ದಾರೆ.

ರಿಷಬ್ ಶೆಟ್ಟಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಿರುವ ಅವರು, ಇಂತಹ ವ್ಯಕ್ತಿಯನ್ನು ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮದ ರಾಯಭಾರಿಯಾಗಿ ಆಯ್ಕೆ ಮಾಡಿರುವುದು ಪಕ್ಷದ ಕಾರ್ಯಕರ್ತರಿಗೆ ಮುಜುಗರ ಉಂಟುಮಾಡಿದೆ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ನಿರ್ಧಾರವನ್ನು ಮರುಪರಿಶೀಲಿಸಿ, ರಿಷಬ್ ಶೆಟ್ಟಿ ಅವರ ನೇಮಕಾತಿಯನ್ನು ತಕ್ಷಣ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪಕ್ಷದ ಕಾರ್ಯಕರ್ತರು ತಮ್ಮ ರಾಷ್ಟ್ರೀಯ ನಾಯಕರ ವಿರುದ್ಧ ನಡೆದಿರುವ ನಿಂದನೆಯನ್ನು ಮರೆತಿಲ್ಲ. ಆದ್ದರಿಂದ ರಿಷಬ್ ಶೆಟ್ಟಿ ಅವರನ್ನು ರಾಯಭಾರಿ ಸ್ಥಾನದಿಂದ ಕೈಬಿಟ್ಟು ಬೇರೆ ವ್ಯಕ್ತಿಯನ್ನು ನೇಮಕ ಮಾಡಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಲಾಗಿದೆ.



