Friday, June 19, 2026

spot_img

ಮಲ್ಪೆಯಲ್ಲಿ ಮಾದಕ ವಸ್ತು ದಂಧೆ ಪೊಲೀಸ್ ದಾಳಿ: ಹೋಂಸ್ಟೇ ಮಾಲೀಕ ಸೇರಿ ಏಳು ಮಂದಿ ಬಂಧನ.

ಉಡುಪಿ : ಮಾದಕ ವಸ್ತುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಹೋಂಸ್ಟೇ ಮೇಲೆ ಮಲ್ಪೆ ಪೊಲೀಸರು ದಾಳಿ ನಡೆಸಿ  ಮಾಲೀಕ ಸೇರಿ ಏಳು ಮಂದಿಯನ್ನು ಬಂಧಿಸಿರುವ ಘಟನೆ ತೆಂಕನಿಡಿಯೂರಿನ ತೊಟ್ಟಂ ಚರ್ಚ್ ಸಮೀಪದ ವಿಶ್ರಾಮ್ ಹೋಂಸ್ಟೇಯಲ್ಲಿ ನಡೆದಿದೆ. ಹೂಡೆಯ ನಾಜೀಲ್ (31), ಮಂಚಕಲ್‌ನ ಮೊಹಮ್ಮದ್ ಅಜರುದ್ದೀನ್ (42), ಮೊಹಮ್ಮದ್ ಅಫ್ನಾನ್ (19), ತೆಂಕನಿಡಿಯೂರಿನ ವಿಘ್ನೇಶ್ (35), ಹೋಂಸ್ಟೇ ಸಿಬ್ಬಂದಿ ಬಸವರಾಜ್ (36), ಹೋಂಸ್ಟೇ ಮಾಲೀಕ ಧನ್ವತ್ ರಿಕೀತ್ (36) ಹಾಗೂ ಗೀತಾಂಜಲಿ ಜೇನಾ (44) ಬಂದಿತರು.

ವಿಶ್ರಾಮ್ ಹೋಂಸ್ಟೇಯಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ನಡೆಯುತ್ತಿರುವ ಕುರಿತು ಬಂದ ಖಚಿತ ಮಾಹಿತಿಯ ಮೇರೆಗೆ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಹಾಗೂ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನೀಲ್ ಕುಮಾರ್ ಡಿ. ಹಾಗೂ ತನಿಖಾ ಪಿಎಸ್ಐ ಗಂಗಪ್ಪ ಎಸ್. ನೇತೃತ್ವದ ತಂಡ ದಾಳಿ ನಡೆಸಿತು.

ದಾಳಿಯ ವೇಳೆ ಹೋಂಸ್ಟೇಯ ಒಂದು ಕೊಠಡಿಯಲ್ಲಿ ಇದ್ದ ನಾಲ್ವರನ್ನು ಪರಿಶೀಲಿಸಿದಾಗ ಅವರು ಮಾದಕ ವಸ್ತು ಸೇವನೆ ಮಾಡಿರುವುದು ಪತ್ತೆಯಾಯಿತು. ಬಳಿಕ ಪಂಚರ ಸಮ್ಮುಖದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ 33.81 ಗ್ರಾಂ ಗಾಂಜಾ, 9.73 ಗ್ರಾಂ ಎಂಡಿಎಂಎ ಮಾದಕ ವಸ್ತು, ಐದು ಮೊಬೈಲ್ ಫೋನ್‌ಗಳು ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮಾದಕ ವಸ್ತುಗಳ ಒಟ್ಟು ಮೌಲ್ಯ ಸುಮಾರು 23 ಸಾವಿರ ಎಂದು ಅಂದಾಜಿಸಲಾಗಿದೆ.

ಪ್ರವಾಸೋದ್ಯಮ ಇಲಾಖೆ ಹಾಗೂ ಪೊಲೀಸರಿಂದ ಅನಧಿಕೃತವಾಗಿ ಹೋಂಸ್ಟೇ ನಡೆಸದಂತೆ ಈ ಹಿಂದೆ ನೋಟಿಸ್ ನೀಡಲಾಗಿದ್ದರೂ, ನಿಯಮ ಉಲ್ಲಂಘಿಸಿ ಹೋಂಸ್ಟೇ ನಡೆಸುವುದರ ಜೊತೆಗೆ ಮಾದಕ ವಸ್ತು ಸೇವನೆಗೆ ಅವಕಾಶ ಕಲ್ಪಿಸಿರುವ ಆರೋಪದಡಿ ಹೋಂಸ್ಟೇ ಮಾಲೀಕ ಧನ್ವತ್ ರಿಕೀತ್ ಹಾಗೂ ಸಿಬ್ಬಂದಿ ಬಸವರಾಜ್ ಅವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೀತಾಂಜಲಿ ಜೇನಾ ಎಂಬವರನ್ನೂ ವಶಕ್ಕೆ ಪಡೆಯಲಾಗಿದೆ.

ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಕ್ರಮ ಕೈಗೊಳ್ಳಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles