ಉಡುಪಿ : ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಕಾರ್ಮಿಕರ ಭದ್ರತೆಗೆ ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡುತ್ತಿದ್ದು, ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಭದ್ರತೆಯನ್ನು ವಿಸ್ತರಿಸುವ ಉದ್ದೇಶದಿಂದ ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆ ಜಾರಿಗೊಳಿಸಲಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಣಿಪಾಲದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯಡಿ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶಾದ್ಯಂತ ಉದ್ಯೋಗ ಸೃಷ್ಟಿಗೆ ವೇಗ ನೀಡುವ ಉದ್ದೇಶದಿಂದ ಜಾರಿಗೆ ತರಲಾದ ಈ ಯೋಜನೆಯು ಈಗಾಗಲೇ 15 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳ ಸೃಷ್ಟಿಗೆ ಬೆಂಬಲ ನೀಡಿದೆ. ಒಟ್ಟು 99,446 ಕೋಟಿ ರೂ. ವೆಚ್ಚದ ಈ ಯೋಜನೆಯು ಎರಡು ವರ್ಷಗಳ ಅವಧಿಯಲ್ಲಿ 3.5 ಕೋಟಿಗೂ ಹೆಚ್ಚು ಉದ್ಯೋಗಗಳ ಸೃಷ್ಟಿಗೆ ಉತ್ತೇಜನ ನೀಡುವ ಗುರಿ ಹೊಂದಿದೆ ಎಂದು ಹೇಳಿದರು.

ಭಾರತದಲ್ಲಿ 42 ಕೋಟಿ ಅಸಂಘಟಿತ ಕಾರ್ಮಿಕರು ದುಡಿಯುತ್ತಿದ್ದು, 29 ಕೋಟಿ ಕಾರ್ಮಿಕರು ಇ-ಶ್ರಮ ಪೋರ್ಟಲ್ನಲ್ಲಿ ನೋಂದಾಯಿತರಾಗಿದ್ದಾರೆ. ಸಂಘಟಿತ ಹಾಗೂ ಅಸಂಘಟಿತ ಕ್ಷೇತ್ರದ ಎಲ್ಲ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾಗಿವೆ. ಉಡುಪಿ ಜಿಲ್ಲೆಯಲ್ಲಿ ಯೋಜನೆಯ ಭಾಗ–ಎ ಅಡಿಯಲ್ಲಿ 774 ಉದ್ಯೋಗಿಗಳಿಗೆ 48.58 ಲಕ್ಷ ರೂ. ಪ್ರೋತ್ಸಾಹಧನ ವಿತರಿಸಲಾಗಿದ್ದು, ಭಾಗ–ಬಿ ಅಡಿಯಲ್ಲಿ 199 ಸಂಸ್ಥೆಗಳು 3.18 ಕೋಟಿ ರೂ.ಗಳ ಪ್ರೋತ್ಸಾಹಧನವನ್ನು ಪಡೆದಿವೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಯಶ್ಪಾಲ್ ಸುವರ್ಣ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಉದ್ಯೋಗ ಹಾಗೂ ಸಾಮಾಜಿಕ ಭದ್ರತಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಾಗಿವೆ ಎಂದರು. ಇದೇ ವೇಳೆ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯಡಿ ಸುಮಾರು 2,400 ಕೋಟಿ ರೂ. ಮೌಲ್ಯದ ಪ್ರೋತ್ಸಾಹಧನವನ್ನು ಫಲಾನುಭವಿಗಳಿಗೆ ವಿತರಿಸಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್, ಇಪಿಎಫ್ಒ ಪ್ರಾದೇಶಿಕ ಆಯುಕ್ತ ಶಶಿಕಾಂತ್ ದಹಿಯಾ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಚ್.ಕೆ. ಗಂಗಾಧರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



