ಉಡುಪಿ : ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಸೇವಾ ನಿವೃತ್ತಿ ಹೊಂದಿದ ಉಡುಪಿ ನಗರ ಠಾಣೆಯ ಪಿಎಸ್ಐ ನಾರಾಯಣ ಬದಿಯಡ್ಕ, ಕಾರ್ಕಳ ಪೊಲೀಸ್ ಠಾಣೆಯ ಪಿಎಸ್ಐ ಸುಂದರನ್, ಸಿಎಸ್ಪಿ ವಿಭಾಗದ ಎಎಸ್ಐ ಪ್ರದೀಪ್, ಬ್ರಹ್ಮಾವರ ಠಾಣೆಯ ಎಎಸ್ಐ ಕೃಷ್ಣಪ್ಪ ಹಾಗೂ ಹೆಬ್ರಿ ಠಾಣೆಯ ಶ್ರೀಧರ್ ಕಾಸರಗೋಡು ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರು ನಿವೃತ್ತ ಅಧಿಕಾರಿಗಳಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಪೊಲೀಸ್ ಇಲಾಖೆಯಲ್ಲಿ ಅವರು ಸಲ್ಲಿಸಿದ ನಿಷ್ಠಾವಂತ ಸೇವೆಯನ್ನು ಸ್ಮರಿಸಿದ ಎಸ್ಪಿ, ನಿವೃತ್ತಿ ಜೀವನ ಆರೋಗ್ಯ, ನೆಮ್ಮದಿ ಹಾಗೂ ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ವಿವಿಧ ಠಾಣೆಗಳ ಸಿಬ್ಬಂದಿಗಳು ಹಾಗೂ ಸಹೋದ್ಯೋಗಿಗಳು ಉಪಸ್ಥಿತರಿದ್ದು, ನಿವೃತ್ತ ಅಧಿಕಾರಿಗಳ ಸೇವಾ ಅನುಭವಗಳನ್ನು ಸ್ಮರಿಸಿ ಶುಭಾಶಯ ಕೋರಿದರು. ದೀರ್ಘಕಾಲ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಸಾರ್ವಜನಿಕ ಸೇವೆಗೆ ತಮ್ಮದೇ ಆದ ಕೊಡುಗೆ ನೀಡಿದ ಅಧಿಕಾರಿಗಳಿಗೆ ಸಹೋದ್ಯೋಗಿಗಳು ಆತ್ಮೀಯವಾಗಿ ವಿದಾಯ ಹೇಳಿದರು.



