ಉಡುಪಿ : ಉಡುಪಿ ನಗರಸಭೆಯು ಮಳೆಗಾಲದ ಪೂರ್ವ ತಯಾರಿ ಕಾಮಗಾರಿಗಳನ್ನು ಸಮರ್ಪಕವಾಗಿ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಆರೋಪಿಸಿದ್ದಾರೆ. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿನ ರಾಜಕಾಲುವೆ, ಸಣ್ಣ ಚರಂಡಿ ಹಾಗೂ ಮಳೆ ನೀರು ಹರಿಯುವ ಕಾಲುವೆಗಳ ಹೂಳೆತ್ತುವ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಇದರಿಂದ ಮಳೆಗಾಲದಲ್ಲಿ ನಗರದಲ್ಲಿ ನೀರು ನಿಲ್ಲುವ ಭೀತಿ ಎದುರಾಗಿದೆ ಎಂದು ಹೇಳಿದರು.

ಬನ್ನಂಜೆ ಪ್ರದೇಶದಲ್ಲಿಯೂ ಚರಂಡಿ ಸ್ವಚ್ಛತಾ ಕಾರ್ಯ ಪ್ರಾರಂಭವಾಗಿಲ್ಲ ಎಂದು ಆರೋಪಿಸಿದ ಅವರು, ವಾರದೊಳಗೆ ಹೂಳೆತ್ತುವ ಕಾಮಗಾರಿ ಪೂರ್ಣಗೊಳಿಸದಿದ್ದರೆ ನಗರಸಭೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು. ಇದೇ ವೇಳೆ ಉದ್ದಿಮೆ ಪರವಾನಿಗೆ ಶುಲ್ಕವನ್ನು ನಗರಸಭೆ ಅನ್ಯಾಯವಾಗಿ ಹೆಚ್ಚಿಸಿದೆ ಎಂದು ಕಿಡಿಕಾರಿದರು. ಮಾಜಿ ನಗರಸಭಾ ಅಧ್ಯಕ್ಷ ಪ್ರಭಾಕರ್ ಪೂಜಾರಿ ಮಾತನಾಡಿ, ನಗರಸಭೆ ಕೌನ್ಸಿಲ್ ಅವಧಿ ಅಕ್ಟೋಬರ್ನಲ್ಲೇ ಅಂತ್ಯಗೊಂಡಿದ್ದು, ಬಳಿಕ ಶಾಸಕರ ನೇತೃತ್ವದಲ್ಲಿ ಮಳೆಗಾಲ ಪೂರ್ವ ಸಿದ್ಧತೆ ಕುರಿತು ಹಲವು ಸಭೆಗಳು ನಡೆದಿದ್ದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಚರಂಡಿ ಹೂಳೆತ್ತುವ ಕಾರ್ಯಕ್ಕಾಗಿ ಟೆಂಡರ್ ಕರೆಯಲಾಗಿದ್ದರೂ, ಕಾಮಗಾರಿ ಆರಂಭಿಸಲು ಇನ್ನೂ ಆದೇಶ ನೀಡಿಲ್ಲ. ನಗರದಲ್ಲಿನ ಬಹುತೇಕ ಚರಂಡಿಗಳು ಮುಚ್ಚಿಹೋಗಿದ್ದು, ಮಳೆ ನೀರು ರಸ್ತೆಗಳಲ್ಲಿ ಹರಿದು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ಹೇಳಿದರು. ನಗರಸಭೆ ಕಾನೂನು ಮೀರಿ ಉದ್ದಿಮೆ ಪರವಾನಿಗೆ ಶುಲ್ಕ ಹೆಚ್ಚಿಸಿದ್ದು, ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡುವಲ್ಲಿ ವಿಫಲವಾಗಿದೆ. ಕಚೇರಿಯಲ್ಲಿ ಸಿಬ್ಬಂದಿ ಸಮಯಕ್ಕೆ ಲಭ್ಯವಿರುವುದಿಲ್ಲ. ಸಾರ್ವಜನಿಕರು ಕೆಲಸಕ್ಕಾಗಿ ಬಂದಾಗ ಕಚೇರಿ ಬಹುತೇಕ ಖಾಲಿಯಾಗಿರುವ ಸ್ಥಿತಿ ಕಂಡು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು ಮಾತನಾಡಿ, ಜಿಲ್ಲಾಧಿಕಾರಿಗಳ ಅಸಡ್ಡೆ ನೀತಿಯಿಂದ ನಗರಸಭೆಯಲ್ಲಿ ಅವ್ಯವಸ್ಥೆಗಳು ಹೆಚ್ಚಾಗಿವೆ. ಆರ್ಥಿಕ ಕ್ರೂಡೀಕರಣ ಹಾಗೂ ಕಸ ವಿಲೇವಾರಿ ವಿಚಾರದಲ್ಲಿಯೂ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು. ಟೆಂಡರ್ ಪಡೆದ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆ ಹೆಚ್ಚುತ್ತಿದೆ ಎಂದು ಅವರು ಹೇಳಿದರು. ನಗರಸಭೆ ಹಾಗೂ ಜಿಲ್ಲಾಡಳಿತ ಎರಡೂ ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದ ಬಿಜೆಪಿ ಮುಖಂಡರು, ಒಂದು ವಾರದೊಳಗೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.



