ಉಡುಪಿ : ಶಂಕರನಾರಾಯಣ ವಲಯ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ದೊಟ್ಟಿನಬೇರು ಮೀಸಲು ಅರಣ್ಯ ಪ್ರದೇಶದ ಬಳಿ ಚಿರತೆಯನ್ನು ಕೊಂದು ಬಿಸಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ನಾಲ್ವರು ಆರೋಪಿಗಳನ್ನು ಬಂಧಿಸಿ, ಬಂದೂಕು, ಜೀವಂತ ಗುಂಡುಗಳು ಹಾಗೂ ಚಿರತೆಯ ಅಂಗಾಂಗಗಳನ್ನು ವಶಪಡಿಸಿಕೊಂಡಿದೆ.

ಸಿದ್ದಾಪುರ – ಶಿವಮೊಗ್ಗ ಜಿಲ್ಲಾ ರಸ್ತೆಯ ಪಕ್ಕದಲ್ಲಿ ಚಿರತೆಯ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಶಂಕರನಾರಾಯಣ ವಲಯದಲ್ಲಿ ತಕ್ಷೀರು ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ಮುಂದುವರಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಗೌಪ್ಯ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದರು.

ಈ ವೇಳೆ ಆರೋಪಿ ಮಂಜುನಾಥ ಶೆಟ್ಟಿ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ಆರೋಪಿಗಳಾದ ಮಹಮ್ಮದ್ ನದೀಮ್ ಕರಾಣಿ, ನಾಗರಾಜ ಭೋವಿ ಹಾಗೂ ವೆಂಕಟರಮಣ ಭೋವಿ ಅವರನ್ನು ಬಂಧಿಸಲಾಯಿತು.ಬಂಧಿತ ಆರೋಪಿಗಳಿಂದ ಚಿರತೆಯ ಅಂಗಾಂಗಗಳು, ಒಂದು ಬಂದೂಕು, ಐದು ಜೀವಂತ ಗುಂಡುಗಳು, ಎರಡು ಮೋಟಾರ್ ಬೈಕ್‌ಗಳು ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ.


ಬಂಧಿತ ಆರೋಪಿಗಳನ್ನು ಕುಂದಾಪುರ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೆನ್ ಪಿ ಮಾರ್ಗದರ್ಶನದಲ್ಲಿ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್ ಹಾಗೂ ಸಿಬ್ಬಂದಿ, ಕುಂದಾಪುರ ಮತ್ತು ಬೈಂದೂರು ವಲಯದ ಅರಣ್ಯ ಸಿಬ್ಬಂದಿ, ಕಂಡ್ಲೂರು ಗ್ರಾಮಾಂತರ ಪೊಲೀಸ್ ಠಾಣೆಯ ನಿರಂಜನ್ ಗೌಡ ಮತ್ತು ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರಕರಣದ ತನಿಖೆ ಮುಂದುವರಿದಿದೆ.



