ಉಡುಪಿ : ಕುಂದಾಪುರ ಪುರಸಭೆ ವ್ಯಾಪ್ತಿಯ ಬೋರ್ಡ್ ಹೈಸ್ಕೂಲ್ ಪಕ್ಕದಲ್ಲಿರುವ ಪುರಸಭೆಗೆ ಸೇರಿದ ಜಾಗವನ್ನು ರಾಜಕೀಯ ಪಕ್ಷಗಳಿಗೆ ನೀಡುವ ಪ್ರಸ್ತಾವಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್) ಕುಂದಾಪುರ ತಾಲೂಕು ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಪುರಸಭೆಯ ಆಡಳಿತಾಧಿಕಾರಿಗೆ ಮನವಿ ಸಲ್ಲಿಸಿರುವ ಸಿಪಿಐಎಂ, ಕಂದಾಯ ನಿರೀಕ್ಷಕರ ವರದಿಯ ಪ್ರಕಾರ ಸಂಬಂಧಿತ ಜಾಗವು ಪೊರಂಬೋಕು ರಸ್ತೆ ತೋಡು ಪ್ರದೇಶವಾಗಿರುವುದರಿಂದ ರಾಜಕೀಯ ಪಕ್ಷಗಳಿಗೆ ಮಂಜೂರು ಮಾಡುವ ಅವಕಾಶವಿಲ್ಲ ಎಂದು ತಿಳಿಸಿದೆ.

ಈ ಹಿಂದೆ ಇದೇ ಜಾಗವನ್ನು ಲಗೇಜ್ ಆಟೋ ನಿಲ್ದಾಣವಾಗಿ ಗುರುತಿಸುವ ಉದ್ದೇಶದಿಂದ 2000ನೇ ಇಸವಿಯಲ್ಲಿ ಪುರಸಭೆ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಿತ್ತು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಉಪಯೋಗಕ್ಕೆ ಸೂಕ್ತ ಜಾಗಗಳ ಕೊರತೆ ಇರುವ ಸಂದರ್ಭದಲ್ಲಿ, ಲಭ್ಯವಿರುವ ಸ್ಥಳವನ್ನು ರಾಜಕೀಯ ಪಕ್ಷದ ಕಚೇರಿಗೆ ನೀಡುವುದು ಸರಿಯಲ್ಲ ಎಂದು ಪಕ್ಷ ಅಭಿಪ್ರಾಯಪಟ್ಟಿದೆ.

2000ರ ಪುರಸಭೆ ತೀರ್ಮಾನದಂತೆ ಈ ಸ್ಥಳವನ್ನು ಲಗೇಜ್ ಆಟೋ-ಟೆಂಪೋ ನಿಲ್ದಾಣವಾಗಿಯೇ ಕಾಯ್ದಿರಿಸಿ, ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡಬೇಕು ಎಂದು ಪುರಸಭೆ ಆಡಳಿತಾಧಿಕಾರಿಯನ್ನು ಸಿಪಿಐಎಂ ಒತ್ತಾಯಿಸಿದೆ. ಮನವಿ ಸಲ್ಲಿಸಿದ ನಿಯೋಗದಲ್ಲಿ ಸಿಪಿಐಎಂ ಹಿರಿಯ ಮುಖಂಡ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ವಿ. ನರಸಿಂಹ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಗರ್, ಜಿಲ್ಲಾ ಮುಖಂಡ ಎಚ್. ನರಸಿಂಹ, ತಾಲೂಕು ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ಆಟೋ ಸಂಘದ ಮುಖಂಡ ರಾಜು ದೇವಾಡಿಗ ಉಪಸ್ಥಿತರಿದ್ದರು.



