ಉಡುಪಿ : ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಶಿರೂರು ಮಠದ ವತಿಯಿಂದ ಆಯೋಜಿಸಲಾದ ಕೃಷ್ಣಮಂತ್ರ ಜಪ-ಲೇಖನ ಯಜ್ಞಕ್ಕೆ ಪರ್ಯಾಯ ಶಿರೂರು ಮಠಾಧೀಶ ಶ್ರೀ ವೇದವರ್ಧನ ಸ್ವಾಮೀಜಿ ಮಠದ ರಾಜಾಂಗಣದಲ್ಲಿ ಚಾಲನೆ ನೀಡಿದರು.

ಯಜ್ಞವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಯಾವುದೇ ಪಾಠ ಅಥವಾ ಮಂತ್ರವನ್ನು ಕೇವಲ ಬಾಯಲ್ಲಿ ಜಪಿಸಿದರೆ ಅದು ಸಂಪೂರ್ಣವಾಗಿ ಮನಸ್ಸಿನಲ್ಲಿ ಉಳಿಯದೇ ಹೋಗಬಹುದು. ಆದರೆ ಅದನ್ನು ಪುನಃ ಪುನಃ ಬರೆಯುವುದರಿಂದ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ ಎಂದು ಹೇಳಿದರು. ಶ್ರೀಕೃಷ್ಣ ಮಂತ್ರವನ್ನು ಪುಸ್ತಕದಲ್ಲಿ ಬರೆದು ಜೀವನದಲ್ಲಿ ಅಳವಡಿಸಿಕೊಳ್ಳುವ ಉದ್ದೇಶದಿಂದ ಈ ಜಪ-ಲೇಖನ ಯಜ್ಞವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಇಸ್ಕಾನ್ನ ಹಿರಿಯ ಉಪಾಧ್ಯಕ್ಷ ಚಂಚಲಪತಿ ದಾಸ ಅವರು ಲೇಖನ ಹೊತ್ತಿಗೆಯನ್ನು ಅನಾವರಣಗೊಳಿಸಿದರು. ಬೆಂಗಳೂರಿನ ವಿದ್ಯಾ ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ವಿದ್ವಾನ್ ಹರಿದಾಸ ಭಟ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹಾಗೂ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಿರೂರು ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ ಸ್ವಾಗತಿಸಿದರು.



