ಉಡುಪಿ : ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯಡಿ 93ನೇ ನೂತನ ಮನೆ ಹಸ್ತಾಂತರ ಕಾರ್ಯಕ್ರಮ ಬ್ರಹ್ಮಾವರ ತಾಲೂಕಿನ ವಡ್ಡರ್ಸೆಯಲ್ಲಿ ಶುಕ್ರವಾರ ನಡೆಯಿತು. ವಿದ್ಯಾಪೋಷಕ್ ಯೋಜನೆಯ ಫಲಾನುಭವಿಯಾದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಜನಿ ಅವರಿಗೆ ನಿರ್ಮಿಸಲಾದ ಪ್ರತಿಭಾ ನಿಲಯ’ವನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಸಜನಿ ಅವರು ಎಸ್‌ಎಸ್‌ಎಲ್‌ಸಿಯಲ್ಲಿ ಶೇ.98 ಹಾಗೂ ಪ್ರಥಮ ಪಿಯುಸಿಯಲ್ಲಿ ಶೇ.97 ಅಂಕ ಗಳಿಸಿದ್ದು, ಶ್ರೀಮತಿ ಸರಸ್ವತಿ ಮತ್ತು ಬಸವ ಪೂಜಾರಿ ದಂಪತಿಯ ಪುತ್ರಿಯಾಗಿದ್ದಾರೆ. ಮುಂಬೈನ ವಿಂಡ್ಸರ್ ರೆಫ್ರೆಕ್ಟರೀಸ್ ಪ್ರೈ.ಲಿ. ಸಂಸ್ಥೆಯ ಸಿಇಒ ಪ್ರಜ್ಞಾ ಶೆಟ್ಟಿ ಅವರು ತಮ್ಮ ಸಂಸ್ಥೆಯ ಸಿಎಸ್‌ಆರ್ ನಿಧಿಯಡಿ ಈ ಮನೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ಈ ಮನೆಗೆ ‘ಪ್ರತಿಭಾ ನಿಲಯ’ ಎಂದು ನಾಮಕರಣ ಮಾಡಲಾಗಿದೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆ ಮತ್ತು ಮನೆ ನಿರ್ಮಾಣ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿದೆ. ಇಲ್ಲಿ ಯಾವುದೇ ಪ್ರಭಾವ ಕೆಲಸ ಮಾಡುವುದಿಲ್ಲ. ಸಂಸ್ಥೆಯ ಶಿಸ್ತು ಮತ್ತು ಸಮಯಪ್ರಜ್ಞೆ ಎಲ್ಲರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಿವೃತ್ತ ಪ್ರಾಧ್ಯಾಪಕ ಉಪೇಂದ್ರ ಸೋಮಯಾಜಿ ಮಾತನಾಡಿ, ಯಕ್ಷಗಾನ ಕಲಾರಂಗವು ಸಮಾಜಪರ ಕಾಳಜಿಯ ಸಂಘಟನೆಯಾಗಿ ಗುರುತಿಸಿಕೊಂಡಿದ್ದು, ಇಂತಹ ಸಂಸ್ಥೆ ನಾಡಿನ ಹೆಮ್ಮೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಲಯನ್ಸ್ ಗವರ್ನರ್ ವಿ.ಜಿ. ಶೆಟ್ಟಿ ಮಾತನಾಡಿ, ಸಂಸ್ಥೆಯ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ತಿಳಿದು ಪ್ರಜ್ಞಾ ಶೆಟ್ಟಿ ಅವರು ಸಿಎಸ್‌ಆರ್ ಮೂಲಕ ಮನೆ ನಿರ್ಮಾಣಕ್ಕೆ ಪ್ರಾಯೋಜಕತ್ವ ನೀಡಿರುವುದು ಶ್ಲಾಘನೀಯ ಎಂದರು. ಕುಂದಾಪುರ ವಕೀಲರ ಸಂಘದ ಮಾಜಿ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಹಾಗೂ ಚನ್ನರಾಯಪಟ್ಟಣದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಅರುಣಾ ಸೋಮನಾಥ ಹೆಗ್ಡೆ ಅಭ್ಯಾಗತರಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಪ್ರಾಂಶುಪಾಲ ಜಗದೀಶ ನಾವುಡ, ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಬಿ. ಜಗದೀಶ ಶೆಟ್ಟಿ, ಭರತ್ ಶೆಟ್ಟಿ, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಪಿ. ಕಿಶನ್ ಹೆಗ್ಡೆ, ಯು. ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ವಿಷ್ಣುಮೂರ್ತಿ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ ಪ್ರಸ್ತಾವನೆ ಮಾಡಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.



