ಉಡುಪಿ: ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕಿಸುವ ಕೆನರಾ ಬ್ಯಾಂಕ್ ಸರ್ಕಲ್‌ನಲ್ಲಿ ಅಳವಡಿಸಲಾಗಿರುವ ಟ್ರಾಫಿಕ್ ಸಿಗ್ನಲ್ ಲೈಟ್ ವಾಹನ ಚಾಲಕರಿಗೆ ಸ್ಪಷ್ಟವಾಗಿ ಕಾಣಿಸದಿರುವ ಸಮಸ್ಯೆ ತೀವ್ರವಾಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಸಿಗ್ನಲ್ ಲೈಟ್ ಕಾರ್ಯನಿರ್ವಹಿಸುತ್ತಿದ್ದರೂ, ರಸ್ತೆ ತಿರುವಿನ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ದೊಡ್ಡ ಜಾಹೀರಾತು ಫಲಕಗಳು ಸಿಗ್ನಲ್ ದೀಪದ ದೃಶ್ಯಕ್ಕೆ ಅಡ್ಡಿಯಾಗುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. ವಿಶೇಷವಾಗಿ ರಾತ್ರಿ ವೇಳೆ ಜಾಹೀರಾತು ಫಲಕಗಳ ಮೇಲಿನ ದೀಪಾಲಂಕಾರವೇ ಹೆಚ್ಚು ಕಂಗೊಳಿಸುತ್ತಿದ್ದು, ಸಿಗ್ನಲ್ ಲೈಟ್ ಗುರುತಿಸಲು ವಾಹನ ಚಾಲಕರಿಗೆ ತೊಂದರೆಯಾಗುತ್ತಿದೆ ಎನ್ನಲಾಗಿದೆ.

ಈ ಸಮಸ್ಯೆಯಿಂದ ಮಣಿಪಾಲದಿಂದ ಉಡುಪಿಗೆ ತೆರಳುವವರು ಹಾಗೂ ಜಿಲ್ಲಾಧಿಕಾರಿ ಕಚೇರಿಯತ್ತ ಸಾಗುವ ವಾಹನ ಸವಾರರು ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ. ಪರಿಣಾಮವಾಗಿ ಸಂಚಾರ ಅಸ್ತವ್ಯಸ್ತವಾಗುವ ಪರಿಸ್ಥಿತಿಯೂ ನಿರ್ಮಾಣವಾಗುತ್ತಿದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳಬೆಟ್ಟು ತಿಳಿಸಿದ್ದಾರೆ. ಸಿಗ್ನಲ್ ಲೈಟ್ ಸುತ್ತಮುತ್ತಲಿನ ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಜಾಹೀರಾತು ಫಲಕಗಳನ್ನು ತಕ್ಷಣ ತೆರವುಗೊಳಿಸಿ, ವಾಹನ ಚಾಲಕರಿಗೆ ಸಿಗ್ನಲ್ ಸ್ಪಷ್ಟವಾಗಿ ಕಾಣುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಜಿಲ್ಲಾಡಳಿತ ಹಾಗೂ ನಗರಸಭೆಯನ್ನು ಆಗ್ರಹಿಸಿದ್ದಾರೆ.

ಇದೇ ವೇಳೆ, ಸಿಗ್ನಲ್ ಬಳಿ ವಾಹನ ಸವಾರರು ಸುಮಾರು ಒಂದು ನಿಮಿಷ 20 ಸೆಕೆಂಡುಗಳ ಕಾಲ ಕಾಯಬೇಕಾಗುತ್ತಿರುವ ಹಿನ್ನೆಲೆ, ಬಿಸಿಲಿನ ತಾಪದಿಂದ ರಕ್ಷಣೆ ನೀಡಲು ಯಾದಗಿರಿ ಹಾಗೂ ಕಲಬುರಗಿ ಭಾಗಗಳಲ್ಲಿ ಅಳವಡಿಸಿರುವ ಮಾದರಿಯಲ್ಲಿ ಪ್ಲಾಸ್ಟಿಕ್ ಹೊದಿಕೆಯ ನೆರಳಿನ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ. ಸಂಚಾರ ಸುರಕ್ಷತೆ ಹಾಗೂ ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.



