Friday, April 24, 2026

spot_img

ಒಳ ಮೀಸಲಾತಿ ವಿಚಾರದಲ್ಲಿ ಸಿಎಂ ದಿಟ್ಟ ನಿರ್ಧಾರ ತೆಗೆದುಕೊಳ್ಳಲಿ: ಸಂಸದ ಕೋಟ

ಉಡುಪಿ: ಪರಿಶಿಷ್ಟ ಜಾತಿ ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಭಯೋತ್ಪಾದಕ ಎಂದು ಕರೆದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿ, ಅವರು ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದರು, ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರವು ನಾಗಮೋಹನ ದಾಸ ವರದಿಯನ್ನು ಸ್ವೀಕರಿಸಿಲ್ಲ. ಎಲ್ಲರನ್ನೂ ಸಂತೈಸುವ ಭರದಲ್ಲಿ ಸಮಾಜದಲ್ಲಿ ಗೊಂದಲ ನಿರ್ಮಾಣ ಮಾಡಲಾಗುತ್ತಿದೆ. ಒತ್ತಡ ಹೆಚ್ಚಾದಾಗ ಮಾತ್ರ ವಿಶೇಷ ಸಚಿವ ಸಂಪುಟ ಸಭೆ ಕರೆಯುತ್ತೇವೆ ಎಂದು ಹೇಳುವುದು ಬಿಟ್ಟರೆ, ಸರ್ಕಾರ ಈವರೆಗೆ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಟೀಕಿಸಿದರು.

ವಿಶೇಷವಾಗಿ ಅಲೆಮಾರಿ ಸಮುದಾಯದವರು ತೀವ್ರ ಅನ್ಯಾಯಕ್ಕೊಳಗಾಗಿದ್ದಾರೆ. ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ಇವರಿಗೆ ನ್ಯಾಯ ಸಿಗಬೇಕು. ಸದಾಶಿವ ಆಯೋಗ ಮತ್ತು ನಾಗಮೋಹನ ದಾಸ ಆಯೋಗದ ವರದಿಗಳನ್ನು ಸಮರ್ಪಕವಾಗಿ ಪರಿಶೀಲಿಸಿ, ಮುಖ್ಯಮಂತ್ರಿಗಳು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಪೂಜಾರಿ ಆಗ್ರಹಿಸಿದರು.

ಇನ್ನು, ಪ್ರಧಾನಿ ಮೋದಿಯವರ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕೋಟ ಶ್ರೀನಿವಾಸ ಪೂಜಾರಿ, ಖರ್ಗೆ ಅವರು ಕರ್ನಾಟಕದಿಂದ ಮೇಲೆದ್ದು ಬಂದ ಹಿರಿಯ ರಾಜಕಾರಣಿಯಾಗಿದ್ದು, ಅವರ ಬಗ್ಗೆ ನಮಗೆ ಗೌರವವಿದೆ. ಆದರೆ, ಅವರು ಇತ್ತೀಚೆಗೆ ಪ್ರಧಾನಿಯವರನ್ನು ಭಯೋತ್ಪಾದಕ ಎಂದು ಕರೆದಿರುವುದು ಅಸಂಬದ್ಧ ಮತ್ತು ಖಂಡನೀಯ ಎಂದರು. ಸಂಘ ಪರಿವಾರವನ್ನು ಈ ಹಿಂದೆ ಸರ್ಪಕ್ಕೆ ಹೋಲಿಸಿದ್ದ ಖರ್ಗೆ, ನೆಹರು ಅವರು ಆರ್‌ಎಸ್‌ಎಸ್ ಅನ್ನು ಪಥಸಂಚಲನಕ್ಕೆ ಆಹ್ವಾನಿಸಿದ್ದನ್ನು ಮರೆತಿದ್ದಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ಮತ್ತು ಸಮುದಾಯಗಳ ಮತ ಗಳಿಸಲು ಈ ರೀತಿ ಪದೇ ಪದೇ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಧರ್ಮದ ಕಾರಣಕ್ಕೆ ಗುಂಡಿಕ್ಕಿ ಕೊಂದವರನ್ನು ಇವರಿಗೆ ಭಯೋತ್ಪಾದಕರೆಂದು ಕಾಣುವುದಿಲ್ಲವೇ? ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಜಯಕಾರ ಹಾಕಿದವರು ಭಯೋತ್ಪಾದಕರಲ್ಲವೇ? ಕುಕ್ಕರ್ ಬಾಂಬ್ ಸ್ಫೋಟಿಸಿದವರು ಇವರಿಗೆ ಬಂಧುಗಳೇ? ಎಂದು ಪ್ರಶ್ನಿಸಿದರು. ಜಗತ್ತಿನಾದ್ಯಂತ ಗೌರವ ಪಡೆದ, ಧರ್ಮವನ್ನು ಮೀರಿ ರಾಷ್ಟ್ರಧರ್ಮ ಪಾಲಿಸುತ್ತಿರುವ ಪ್ರಧಾನಿಯವರನ್ನು ಭಯೋತ್ಪಾದಕ ಎಂದು ಕರೆದಿರುವುದು ಖರ್ಗೆಯವರ ಹಿರಿತನಕ್ಕೆ ಶೋಭೆ ತರುವಂತದ್ದಲ್ಲ. ಕೂಡಲೇ ಅವರು ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ಸಂಸದರು ಒತ್ತಾಯಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles