ಉಡುಪಿ: ರಸ್ತೆ ದಾಟಲು ಯತ್ನಿಸುತ್ತಿದ್ದ ಮಹಿಳೆಗೆ ಅತಿವೇಗದಲ್ಲಿ ಬಂದ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ ದುರ್ಘಟನೆ ಕುಂದಾಪುರ ಸಮೀಪದ ವಂಡ್ಸೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಮೃತರನ್ನು ಶಶಿಕಲಾ ಮೊಗವೀರ (50) ಎಂದು ಗುರುತಿಸಲಾಗಿದ್ದು, ಅವರು ವಂಡ್ಸೆಯಲ್ಲಿ ಹಿಟ್ಟಿನ ಗಿರಣಿ ನಡೆಸಿ ಜೀವನ ಸಾಗಿಸುತ್ತಿದ್ದರು.

ಸಂಜೆ ಸುಮಾರು 7 ಗಂಟೆ ವೇಳೆಗೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನ ಅಂಗಡಿಗೆ ತೆರಳಿ ವಸ್ತು ಖರೀದಿ ಮಾಡಿಕೊಂಡು ಹಿಂದಿರುಗುತ್ತಿದ್ದ ವೇಳೆ, ರಸ್ತೆ ಎದುರುಭಾಗದಲ್ಲಿದ್ದ ಸಂಬಂಧಿಕರ ಕಡೆಗೆ ತೆರಳಲು ಅವರು ರಸ್ತೆ ದಾಟಲು ಮುಂದಾಗಿದ್ದಾರೆ. ಈ ಸಂದರ್ಭ ಚಿತ್ತೂರು ದಿಕ್ಕಿನಿಂದ ವೇಗವಾಗಿ ಬಂದ ಕಾರು ಅವರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಕಾರಣವಾದ ಕಾರನ್ನು ಸುಖೇಶ್ ಶೆಟ್ಟಿ ಎಂಬುವವರು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.

ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮೃತರು ಪತಿ ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಕೊಲ್ಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ.



