ಉಡುಪಿ : ಮನೆಗೆ ಬರುವ ದಾರಿಯಲ್ಲಿ ಕಾರು ಅಡ್ಡಗಟ್ಟಿ ತೊಂದರೆ ನೀಡಿದಲ್ಲದೆ, ಅಕ್ರಮವಾಗಿ ಮನೆಗೆ ನುಗ್ಗಿ ನಿಂದಿಸಿ, ಗೇಟ್‌ಗೆ ಬೀಗ ಹಾಕಿದ ಘಟನೆ ಬೈಂದೂರು ತಾಲೂಕಿನ ಜಡ್ಕಲ್ ಗ್ರಾಮದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸಂದೇಶ್ ಪ್ರಭು ಎಂಬಾತನ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಡ್ಕಲ್ ಗ್ರಾಮದ ನಿವಾಸಿ ಜ್ಯೋತಿ ಪ್ರಭು (74) ಅವರು ನೀಡಿದ ದೂರಿನ ಪ್ರಕಾರ, ಏಪ್ರಿಲ್ 12ರಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಆರೋಪಿ ತನ್ನ ಕಾರನ್ನು ಮನೆಯ ರಸ್ತೆಯಲ್ಲಿ ಉದ್ದೇಶಪೂರ್ವಕವಾಗಿ ಅಡ್ಡಗಟ್ಟಿ ನಿಲ್ಲಿಸಿದ್ದಾನೆ. ಇದನ್ನು ಪ್ರಶ್ನಿಸಿದಾಗ, ಆತ ಮನೆ ಅಂಗಳಕ್ಕೆ ನುಗ್ಗಿ ಜ್ಯೋತಿ ಅವರ ಪುತ್ರ ಮಿಥುನ್ ಪ್ರಭು ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.

ಅದೇ ದಿನ ಸಂಜೆ ಮತ್ತೆ ಬಂದ ಆರೋಪಿ, ಕಾರನ್ನು ಅತಿ ವೇಗವಾಗಿ ಹಾಗೂ ಅಡ್ಡಾದಿಡ್ಡಿಯಾಗಿ ಚಲಾಯಿಸಿ ದೂಳೆಬ್ಬಿಸಿ ಕಿರಿಕಿರಿ ಉಂಟುಮಾಡಿದ್ದಾನೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ಮತ್ತೊಮ್ಮೆ ಮನೆ ಅಂಗಳಕ್ಕೆ ನುಗ್ಗಿ ನಿಂದಿಸಿದ್ದು, ಮನೆಗೆ ಬರುವ ದಾರಿಯ ಗೇಟ್‌ಗೆ ಬೀಗ ಜಡಿದು ಕುಟುಂಬದ ಓಡಾಟಕ್ಕೆ ಅಡ್ಡಿಯುಂಟುಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಜ್ಯೋತಿ ಪ್ರಭು ನೀಡಿದ ದೂರಿನನ್ವಯ ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



