ಉಡುಪಿ: ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳು ಅಂತ್ಯಗೊಂಡು ಶಾಂತಿ ನೆಲೆಸಲಿ ಎಂದು ಆಗ್ರಹಿಸಿ ಕುಂದಾಪುರದ ಅಂತಾರಾಷ್ಟ್ರೀಯ ದುಡಿಯುವ ಮಕ್ಕಳ ಸಂಸ್ಥೆ ‘ನಮ್ಮ ಭೂಮಿ’ಯ ಪ್ರತಿನಿಧಿ, ಮಕ್ಕಳ ಹಕ್ಕುಗಳ ಹೋರಾಟಗಾರ ಹಾಗೂ ರಂಗಭೂಮಿ ಕಲಾವಿದ ರಾಮಾಂಜಿ ಶನಿವಾರ ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಗಾಂಧಿ ಪ್ರತಿಮೆ ಸಮೀಪ ಮೌನ ಧರಣಿ ಆರಂಭಿಸಿದರು.

ಯುದ್ಧ ತೊಲಗಲಿ, ಶಾಂತಿ ನೆಲೆಸಲಿ ಮತ್ತು ಯುದ್ಧ ನಿಲ್ಲಿಸಿ ಪರಿಸರ ಉಳಿಸಿ ಎಂಬ ಘೋಷಣೆಗಳಿರುವ ಫಲಕಗಳನ್ನು ಹಿಡಿದು, ಗಾಂಧಿ ತತ್ವಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಅವರು ಬೆಳಿಗ್ಗೆಯಿಂದ ಸಂಜೆವರೆಗೆ ಸಾಂಕೇತಿಕ ಧರಣಿ ನಡೆಸಿದರು. ಕಳೆದ ಒಂದು ತಿಂಗಳಿನಿಂದ ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧ ಸಂಬಂಧಿ ಘಟನೆಗಳನ್ನು ಕಂಡು ಮನನೊಂದು, ಮಾನವ ಜನಾಂಗದ ಮೇಲೆ ನಡೆಯುತ್ತಿರುವ ಹಿಂಸೆ ಹಾಗೂ ಪ್ರಕೃತಿಯ ಮೇಲೆ ಆಗುತ್ತಿರುವ ದಬ್ಬಾಳಿಕೆಗೆ ವಿರೋಧವಾಗಿ ಗಾಂಧಿ ಮಾದರಿಯಲ್ಲಿ ಮೌನ ಧರಣಿ ಕೈಗೊಂಡಿದ್ದೇನೆ ಎಂದು ರಾಮಾಂಜಿ ಹೇಳಿದರು.

ಈ ಧರಣಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ನಡೆಸಲಾಗುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಅಭಿಯಾನವನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸುವ ಯೋಜನೆ ಇದೆ ಎಂದು ಅವರು ತಿಳಿಸಿದರು.



