ಉಡುಪಿ : ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ಪ್ರಕರಣಗಳಲ್ಲಿ ನಿರಂತರವಾಗಿ ಭಾಗಿಯಾಗಿ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡುತ್ತಿದ್ದ ಆರೋಪಿಯ ವಿರುದ್ಧ ಪಿ.ಐ.ಟಿ. ಎನ್ಡಿಪಿಎಸ್ ಕಾಯ್ದೆಯಡಿ ಬಂಧನ ಆದೇಶ ಜಾರಿಗೊಳಿಸಲಾಗಿದೆ. ಕಾರ್ಕಳ ತಾಲೂಕು ಕಸಬ ಗ್ರಾಮ, ಬಂಗ್ಲೆಗುಡ್ಡೆ, ಸಾದತ್ ಕಾಟೇಜ್, ದಿವಂಗತ ಸುಲೇಮಾನ್ ಅವರ ಪುತ್ರ ಮಹಮ್ಮದ್ ಫೈಜಲ್ (22) ಈತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಆರೋಪಿಯ ವಿರುದ್ಧ ಪೊಲೀಸ್ ನಿರೀಕ್ಷಕರು, ಕಾರ್ಕಳ ನಗರ ಠಾಣೆಯಿಂದ ಸಲ್ಲಿಸಿದ ವರದಿಯ ಆಧಾರದ ಮೇಲೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕರಣವನ್ನು ಪರಿಶೀಲಿಸಿ, ಬಂಧನ ಆದೇಶಕ್ಕಾಗಿ ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ, ಮಹಾನಿರೀಕ್ಷಕರು 07 2026ರಂದು ಬಂಧನ ಆದೇಶ ಹೊರಡಿಸಿದ್ದಾರೆ. ಅದರ ಅನ್ವಯ ಕಾರ್ಕಳ ನಗರ ಠಾಣೆಯ ಪೊಲೀಸರು ಅದೇ ದಿನ ಆರೋಪಿಗೆ ಬಂಧನ ಆದೇಶ ಜಾರಿಗೊಳಿಸಿ, ಆತನನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ.

ಆರೋಪಿಯ ವಿರುದ್ಧ ಈಗಾಗಲೇ ಒಟ್ಟು 5 ಮಾದಕ ದ್ರವ್ಯ ಸಾಗಾಟ ಹಾಗೂ ಮಾರಾಟ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 2 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದ್ದು, 2 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಇನ್ನೊಂದು ಪ್ರಕರಣ ತನಿಖೆಯ ಹಂತದಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



