ಉಡುಪಿ : ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಬಳಿ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಕೋಟೇಶ್ವರ ಗಾಂಧಿ ನಗರದ ನಿವಾಸಿ, ದಿವಂಗತ ಉಂಙಾಕ ಅವರ ಪತ್ನಿ ಅಲಿಮಾಬಿ (62) ಮೃತರು.

ಸೋಮವಾರ ರಾತ್ರಿ ತೆಕ್ಕಟ್ಟೆಯ ಪ್ರೆಸಿಡೆಂಟ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆದ ವಿವಾಹ ಸಮಾರಂಭಕ್ಕೆ ತೆರಳಿದ್ದ ಅಲಿಮಾಬಿ, ಮನೆಗೆ ಮರಳಲು ಇತರ ಮೂವರು ಮಹಿಳೆಯರೊಂದಿಗೆ ರಸ್ತೆ ದಾಟುತ್ತಿದ್ದರು. ಈ ವೇಳೆ ಮಂಗಳೂರಿನಿಂದ ಬಾದಾಮಿ–ಐಹೊಳೆ ಕಡೆಗೆ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಅತಿವೇಗ ಹಾಗೂ ಅಜಾಗರೂಕತೆಯಿಂದ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಡಿಕ್ಕಿಯ ತೀವ್ರತೆಗೆ ಗಂಭೀರವಾಗಿ ಗಾಯಗೊಂಡ ಅಲಿಮಾಬಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



