ಉಡುಪಿ : ಅಜೆಕಾರು ಸಮೀಪದ ಶಿರ್ಲಾಲಿನ ಪಂಗ್ಲಬೆಟ್ಟು ಶ್ರೀ ಬ್ರಹ್ಮಮುಗೇರಕಲ ಕ್ಷೇತ್ರದಲ್ಲಿ ನಡೆದ ತನ್ನಿಮಾನಿಗ ನೇಮದಲ್ಲಿ 7ನೇ ತರಗತಿಯ ವಿದ್ಯಾರ್ಥಿಯೊಬ್ಬ ಹೆಣ್ಣು ದೈವದ ಕೋಲಕ್ಕೆ ಬಣ್ಣ ಹಚ್ಚಿ ದೈವ ನರ್ತನ ಮಾಡಿ ಗಮನ ಸೆಳೆದಿದ್ದಾನೆ. ಬಾಲಕನ ಈ ಪ್ರದರ್ಶನ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಿರ್ಲಾಲು ಶಾಲೆಯ ವಿದ್ಯಾರ್ಥಿ ಸಮರ್ಥ್ ಎಂಬ ಬಾಲಕನೇ ಈ ದೈವ ನರ್ತನ ಮಾಡಿ, ತನ್ನ ಅಜ್ಜ ಮತ್ತು ತಂದೆಯ ಪರಂಪರೆಯ ಕಲೆಗೂ ಮುಂದುವರಿದಿದ್ದಾನೆ. ಅನುವಂಶೀಯವಾಗಿ ಬಂದಿರುವ ಸಿದ್ಧಿಯಿಂದಲೇ ಈತನಿಗೆ ದೈವ ನರ್ತನ ಸಾಧ್ಯವಾಗಿದೆ ಎನ್ನಲಾಗಿದೆ.

ಅಜ್ಜನಿಂದ ಪ್ರೇರಣೆ ಪಡೆದು, ತಂದೆ ಹರೀಶ ಅವರ ಮಾರ್ಗದರ್ಶನದಲ್ಲಿ ಸಮರ್ಥ್ ತನ್ನಿಮಾನಿಗ ಹೆಣ್ಣು ದೈವದ ಕೋಲ ಕಟ್ಟಿದ್ದು, ಸಣ್ಣ ವಯಸ್ಸಿನಲ್ಲೇ ಸಂಪ್ರದಾಯಬದ್ಧವಾಗಿ ಅದನ್ನು ನಿರ್ವಹಿಸಿರುವುದು ಪ್ರಶಂಸೆಗೆ ಪಾತ್ರವಾಗಿದೆ. ತನ್ನಿಮಾನಿಗ ದೈವದ ಕೋಲ ಕಟ್ಟುವವರು ಅವಿವಾಹಿತರಾಗಿರಬೇಕು ಎಂಬ ನಿಯಮವಿದ್ದು, ಸಾಮಾನ್ಯವಾಗಿ ನಸುಕಿನ 2 ಗಂಟೆ ಸುಮಾರಿಗೆ ಕೋಲ ಆರಂಭವಾಗುತ್ತದೆ. ಕರಿಮಣಿ ಕಟ್ಟುವ ವಿಶೇಷ ಪದ್ಧತಿ ಹಾಗೂ ಹೆಣ್ಣು ದೈವಕ್ಕೆ ಮದುವೆ ಮಾಡಿಸುವ ಸಂಪ್ರದಾಯವೂ ಈ ನೇಮದಲ್ಲಿ ಕಾಣಿಸಿಕೊಳ್ಳುತ್ತದೆ.

ಹನ್ನೆರಡು ವರ್ಷದ ಬಾಲಕನೊಬ್ಬ ಈ ಎಲ್ಲಾ ಕಟ್ಟುಪಾಡುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಶಸ್ವಿಯಾಗಿ ದೈವ ನರ್ತನ ಮಾಡಿರುವುದು ತುಳುನಾಡಿನ ಸಂಸ್ಕೃತಿ ಹಾಗೂ ಪರಂಪರೆಯ ಹೆಮ್ಮೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



