ಉಡುಪಿ : ಗ್ರಾಮೀಣ ಯುವಕರು ಕೌಶಲ್ಯಾಧಾರಿತ ತರಬೇತಿಯನ್ನು ಪಡೆದು ಸ್ವಯಂ ಉದ್ಯೋಗ ರೂಪಿಸಿಕೊಳ್ಳಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದರು. ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಅಡಿಯಲ್ಲಿ ಬ್ರಹ್ಮಾವರದ ಕ್ರಾಸ್‌ಲ್ಯಾಂಡ್ ಕಾಲೇಜಿನಲ್ಲಿ ಆಯೋಜಿಸಲಾದ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಪ್ರಮುಖ ಯೋಜನೆಯಾದ ಈ ಕಾರ್ಯಕ್ರಮದಡಿ ಉಡುಪಿ ಜಿಲ್ಲೆಯ 35 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಈ ಸಂದರ್ಭದಲ್ಲಿ ತರಬೇತಿಗಾರರಿಗೆ ಉಚಿತ ಕಿಟ್‌ಗಳನ್ನು ವಿತರಿಸಲಾಯಿತು. 18ರಿಂದ 35 ವರ್ಷ ವಯಸ್ಸಿನ ಗ್ರಾಮೀಣ ಬಡ ಯುವಕರಿಗೆ ಉಚಿತ ತರಬೇತಿ ಹಾಗೂ ಉದ್ಯೋಗಾವಕಾಶ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ತರಬೇತಿಯ ಅವಧಿಯಲ್ಲಿ ಮೂರು ತಿಂಗಳು ಪ್ರತಿ ತಿಂಗಳು 3,500 ಸ್ಟೈಪೆಂಡ್ ನೀಡಲಾಗುತ್ತಿದ್ದು, ಉದ್ಯೋಗ ದೊರೆತ ಬಳಿಕ ಆರು ತಿಂಗಳ ಕಾಲ ಪ್ರತಿ ತಿಂಗಳು 1,200ರಂತೆ ಒಟ್ಟು 7,200 ಸಹಾಯಧನವನ್ನು ಡಿಬಿಟಿ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ನೀಡಲಾಯಿತು.


ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ದೇಶದ ಅಭಿವೃದ್ಧಿಗೆ ಕೌಶಲ್ಯಾಧಾರಿತ ತರಬೇತಿ ಅತ್ಯಂತ ಮುಖ್ಯವಾಗಿದ್ದು, ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು. ಯೋಜನಾ ನಿರ್ದೇಶಕರಾದ ವಿಜಯ್ ಕುಮಾರ್ ಪ್ರಾಸ್ತಾವಿಕವಾಗಿ ಯೋಜನೆ ಕುರಿತು ವಿವರ ನೀಡಿದರು. ಕಾರ್ಯಕ್ರಮದಲ್ಲಿ ಕ್ರಾಸ್‌ಲ್ಯಾಂಡ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ಕ್ಲೆವ್, ತರಬೇತಿ ಮುಖ್ಯಸ್ಥ ಗಣೇಶ್ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ದೀಪಾ ಅನಂತರಾವ್ ಕಿತ್ತೂರು ನಿರೂಪಿಸಿದರು.



