ಉಡುಪಿ : ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಚಲಿಸುತ್ತಿದ್ದ ರೈಲು ಬಾಗಿಲಿನಿಂದ ಹೊರ ಜಿಗಿಯಲು ಯತ್ನಿಸಿದ ವೇಳೆ, ಟಿಕೆಟ್ ತಪಾಸಣಾಧಿಕಾರಿಯ ಸಮಯಪ್ರಜ್ಞೆಯಿಂದ ಅವನನ್ನು ರಕ್ಷಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಕೇರಳದಿಂದ ಮುಂಬೈ ಕಡೆಗೆ ಸಂಚರಿಸುತ್ತಿದ್ದ ರೈಲು ಇನ್ನಂಜೆ ರೈಲು ನಿಲ್ದಾಣದ ಸಮೀಪ ಬಂದಾಗ ಈ ಘಟನೆ ಸಂಭವಿಸಿದೆ. ರೈಲಿನ ಬಾಗಿಲ ಬಳಿ ನಿಂತಿದ್ದ ಯುವಕ ಹಠಾತ್ ಹೊರಗೆ ಜಿಗಿಯಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ತಪಾಸಣಾಧಿಕಾರಿ ಬಾಬು ಅವರು ತಕ್ಷಣ ಕ್ರಮ ಕೈಗೊಂಡು ಅವನನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದರು.

ಈ ಕಾರ್ಯಾಚರಣೆಯಲ್ಲಿ ತಪಾಸಣಾಧಿಕಾರಿ ಸುನೀಲ್, ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ರವಿಪ್ರಕಾಶ್ ಹಾಗೂ ಜೀನ ಪಿಂಟೋ ಸಹ ಸಹಕರಿಸಿದರು. ನಂತರ ರಕ್ಷಿಸಲ್ಪಟ್ಟ ಯುವಕನನ್ನು ಇಂದ್ರಾಳಿ ರೈಲ್ವೆ ರಕ್ಷಣಾ ಪಡೆ ಕಚೇರಿಗೆ ಒಪ್ಪಿಸಲಾಯಿತು. ವಿಚಾರಣೆ ವೇಳೆ ಯುವಕ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದು ತಿಳಿದುಬಂದಿದೆ. ರೈಲ್ವೆ ಪೊಲೀಸ್ ಸಿಬ್ಬಂದಿ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸಹಾಯದಿಂದ ಯುವಕನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರು.

ಆಸ್ಪತ್ರೆಯಲ್ಲಿ ದಾಖಲಾತಿ ಪ್ರಕ್ರಿಯೆ ವೇಳೆ ಆತ ತನ್ನ ಹೆಸರನ್ನು ಸಹಾದ್ (25) ಎಂದು ತಿಳಿಸಿದ್ದು, ಕೇರಳದ ಕೊಯಿಕೊಡ್ ನಿವಾಸಿ ಎಂದು ಹೇಳಿಕೊಂಡಿದ್ದಾನೆ.ಯುವಕನ ಸಂಬಂಧಿಕರು ತಕ್ಷಣ ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



