ಉಡುಪಿ: ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜು, ಉಡುಪಿ ವತಿಯಿಂದ “ಬಿಯಾಂಡ್ ದ ಸ್ಕ್ರೋಲ್ – ರಿರೈಟಿಂಗ್ ದ ಸೋಷಿಯಲ್ ನ್ಯಾರೇಟಿವ್” ಅಂತರ್ ಕಾಲೇಜು ಉತ್ಸವವನ್ನು ನಗರದ ಎಂ.ಜಿ.ಎಂ ಕಾಲೇಜು ಕ್ಯಾಂಪಸ್‌ನ ಟಿ.ಎಂ.ಎ. ಪೈ ಪ್ಲಾಟಿನಮ್ ಜುಬಿಲಿ ಬ್ಲಾಕ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಯಿತು. ಟ್ರೋಫಿ ಅನಾವರಣದೊಂದಿಗೆ ಕಾರ್ಯಕ್ರಮವು ಆರಂಭಗೊಂಡಿದ್ದು, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಶ್ರೀ ಮುರಳಿ ಕಡೆಕಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಡಿಜಿಟಲ್ ಯುಗದಲ್ಲಿ ಯುವಜನತೆ ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗುತ್ತಿರುವ ಸಂದರ್ಭದಲ್ಲಿ, ಇಂತಹ ಉತ್ಸವಗಳು ವಿದ್ಯಾರ್ಥಿಗಳಿಗೆ ಸರಿಯಾದ ದಿಕ್ಕು ತೋರಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಮಣಿಪಾಲದ ಆಡಳಿತಾಧಿಕಾರಿ ಡಾ. ಕೆ. ಶ್ರೀಧರ್ ಆರ್. ಪೈ ಭಾಗವಹಿಸಿ, ವಿದ್ಯಾರ್ಥಿಗಳು ಪಠ್ಯಕ್ರಮಕ್ಕೆ ಮಾತ್ರ ಸೀಮಿತವಾಗದೇ ಇಂತಹ ಸಾಂಸ್ಕೃತಿಕ ಹಾಗೂ ಸೃಜನಾತ್ಮಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಅವಶ್ಯಕ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯಕ್ ವಹಿಸಿಕೊಂಡಿದ್ದರು. ಗೌರವ ಅತಿಥಿಗಳಾಗಿ ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತಾ ಮೈಯ್ಯ, ಎಂ.ಜಿ.ಎಂ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಮಾಲತಿ ದೇವಿ, ಎಂ.ಜಿ.ಎಂ ಪದವಿ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಬಿ.ಸಿ.ಎ ಸಂಯೋಜಕರಾದ ಡಾ. ಎಂ. ವಿಶ್ವನಾಥ್ ಪೈ, ಬಿ.ಬಿ.ಎ ಮತ್ತು ಬಿಕಾಂ ಸಂಯೋಜಕರಾದ ಡಾ. ಮಲ್ಲಿಕಾ ಎ. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರಾದ ಯಾಸಿನ್ ಮನ್ನಾ, ಇಂಗ್ಲಿಷ್ ವಿಭಾಗದ ಉಪನ್ಯಾಸಕರು, ಎಂ.ಜಿ.ಎಂ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಪ್ರತಿನಿಧಿ ನಂದನ್ ಕುಂದರ್ ಹಾಗೂ ಸಂಧ್ಯಾ ಕಾಲೇಜಿನ ಪ್ರತಿನಿಧಿ ಧೀರಜ್ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ ವಿವಿಧ ಸ್ಪರ್ಧೆಗಳು ಮತ್ತು ಸೃಜನಾತ್ಮಕ ಚಟುವಟಿಕೆಗಳು ಆರಂಭಗೊಂಡಿದ್ದು, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.



