ಉಡುಪಿ: ಸಂತೆಕಟ್ಟೆ ಅಂಡರ್‌ಪಾಸ್ ಕಾಮಗಾರಿ ಅಂತಿಮ ಹಂತಕ್ಕೆ ತಲುಪುತ್ತಿರುವ ಸಂದರ್ಭದಲ್ಲಿ, ಸಂತೆಕಟ್ಟೆಯಿಂದ ಮಲ್ಪೆ ರಸ್ತೆ ಕಡೆಗೆ ಹೋಗುವ ಮಾರ್ಗದಲ್ಲಿ ನಿರ್ಮಿಸಲಾದ ಸೈಡ್ ವಾಲ್ ಕುರಿತು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.

ಸಂಬಂಧಿತ ಸ್ಥಳದಲ್ಲಿ ಸೈಡ್ ವಾಲ್ ಅನ್ನು ನೇರವಾಗಿ ನಿರ್ಮಿಸದೆ ಸ್ವಲ್ಪ ತಿರುಗುಮುಖವಾಗಿ ನಿರ್ಮಿಸಿರುವುದರಿಂದ, ಅಲ್ಲಿ ಸೈಡ್ ಗ್ರಿಲ್ ಅಳವಡಿಸಲಾಗಿದೆ. ಇದರ ಪರಿಣಾಮವಾಗಿ ಮುಂದಿನ ರಸ್ತೆ ಭಾಗವು ಕಿರಿದಾಗಿ ತಿರುಗುವಂತಾಗಿ, ವಾಹನ ಸಂಚಾರಕ್ಕೆ ಅಸೌಕರ್ಯ ಉಂಟಾಗಿದೆ. ಈ ಪ್ರದೇಶವು ಕೃತಕ ಅಪಘಾತ ವಲಯವಾಗಿ ಮಾರ್ಪಡುವ ಸಾಧ್ಯತೆ ಇದೆ ಎಂಬ ಆತಂಕ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಕೆಲವರು ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ರೀತಿಯ ವಿನ್ಯಾಸ ಮಾಡಲಾಗಿದೆ ಎಂಬ ಅನುಮಾನವೂ ವ್ಯಕ್ತವಾಗಿದೆ. ಆದರೆ ಇದರಿಂದ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಆದ್ದರಿಂದ ಸಂಬಂಧಿತ ರಸ್ತೆ ಪ್ರಾಧಿಕಾರವು ಈ ಬಗ್ಗೆ ತಕ್ಷಣ ಗಮನಹರಿಸಿ, ಸೈಡ್ ವಾಲ್ ಅನ್ನು ಸರಿಯಾಗಿ ಮುಂದಕ್ಕೆ ಸರಿಸಿ ರಸ್ತೆಯನ್ನು ನೇರಗೊಳಿಸುವ ಮೂಲಕ ಸಂಭವನೀಯ ಅನಾಹುತಗಳನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ವಿನಂತಿಸಿದ್ದಾರೆ.



