ಉಡುಪಿ : ನಗರದ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ಎಂ.ಸಿ.ಕೆ.ಎಸ್ ಫುಡ್ ಫಾರ್ ದಿ ಹಂಗ್ರೀ ಫೌಂಡೇಶನ್ ವತಿಯಿಂದ 65 ಬಡ ರೋಗಿಗಳಿಗೆ ಆಹಾರ ಪದಾರ್ಥಗಳ ಕಿಟ್‌ಗಳನ್ನು ಹಾಗೂ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ಸರ್ಜನ್ ಡಾ. ಹೆಚ್. ಅಶೋಕ್ ಮಾತನಾಡಿ, ಇಂತಹ ಮಾನವೀಯ ಕಾರ್ಯಗಳಿಂದ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಬಹಳಷ್ಟು ನೆರವು ದೊರೆಯುತ್ತದೆ ಎಂದು ಹೇಳಿದರು. ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನವೆಂದು ಹೇಳಲಾಗುತ್ತದಾದರೂ, ಹಸಿದವರಿಗೆ ಅನ್ನ ನೀಡುವುದು ಸಹ ಮಹಾದಾನವಾಗಿದ್ದು, ಸಮಾಜದಲ್ಲಿ ಇಂತಹ ಸೇವಾ ಮನೋಭಾವ ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಸಂಚಾಲಕಿ ನಿಧಿ ಮಾತನಾಡಿ, ಈ ಹಿಂದೆ ಸಂಸ್ಥೆಯ ವತಿಯಿಂದ ಕ್ಯಾನ್ಸರ್ ಹಾಗೂ ಕ್ಷಯರೋಗಿಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಗಿತ್ತು. ಸಂಸ್ಥಾಪಕರಾದ ಗ್ರ್ಯಾಂಡ್ ಮಾಸ್ಟರ್ ಚೋವಾ ಕೋಕ್ ಸುಯಿ ಅವರ ಸ್ಮರಣಾರ್ಥವಾಗಿ ಬಡ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಎ.ಆರ್.ಟಿ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀನಾಥ್, ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು. ಜಿಲ್ಲಾ ಆಸ್ಪತ್ರೆಯ ಆಪ್ತ ಸಮಾಲೋಚಕ ಮನು ಎಸ್.ಬಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



