ಉಡುಪಿ : ಮುಳ್ಳಿಕಟ್ಟೆಯಿಂದ ನಾಯಕವಾಡಿ ಸಂಪರ್ಕಿಸುವ ಕೆಸಿಡಿಸಿ ರಸ್ತೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಸಾರ್ವಜನಿಕ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಇದಕ್ಕೂ ಮೊದಲು ಈ ರಸ್ತೆಯಲ್ಲಿ ಕಸ ಹಾಗೂ ವಿವಿಧ ತ್ಯಾಜ್ಯಗಳನ್ನು ಅನಧಿಕೃತವಾಗಿ ಬಿಸಾಡುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದರಿಂದ ಪರಿಸರ ಮಾಲಿನ್ಯ ಹಾಗೂ ದುರ್ಗಂಧ ಸಮಸ್ಯೆ ಎದುರಾಗುತ್ತಿತ್ತು. ಸಾರ್ವಜನಿಕರಿಂದಲೂ ಈ ಬಗ್ಗೆ ಅನೇಕ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದಾರೆ.

ಈಗ ರಸ್ತೆಯ ಪ್ರಮುಖ ಭಾಗಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಯಾರಾದರೂ ಕಸ ಅಥವಾ ಇತರೆ ತ್ಯಾಜ್ಯಗಳನ್ನು ರಸ್ತೆಯಲ್ಲಿ ಬಿಸಾಡಿದರೆ ಅವು ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಲಿದೆ. ಇದರ ಆಧಾರದ ಮೇಲೆ ತಪ್ಪಿತಸ್ಥರನ್ನು ಗುರುತಿಸಿ 5,000 ರೂಪಾಯಿಯಿಂದ 25,000 ರೂಪಾಯಿ ರವರೆಗೆ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪರಿಸರ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಹ ಕಸದ ವಿಲೇವಾರಿ ನಿಯಮಗಳನ್ನು ಪಾಲಿಸಿ, ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಲು ಸಹಕರಿಸಬೇಕು ಎಂದು ಗ್ರಾಮ ಪಂಚಾಯತ್ ಮನವಿ ಮಾಡಿದೆ.



