ಉಡುಪಿ : ಸುಳ್ಳು ಮಾಹಿತಿ ನೀಡಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯನ್ನು ನಿಯಂತ್ರಣಕ್ಕೆ ಪಡೆದು ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಿದ ಸೈಬರ್ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಉಡುಪಿ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಹೆಜಮಾಡಿ ಶಿವನಗರ ನಿವಾಸಿ ಸಂದಿ ಅಲಿಯಾಸ್ ಸಂದೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶಾಲ್ ಬಂಗೇರ ಹಾಗೂ ಕೋಲ್ಕತ್ತಾದ ರೋಹನ್ ಡೇ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಭದ್ರಾವತಿಯ ಕೂಡ್ಲಿಗೆರೆ ನಿವಾಸಿ ರುಮಾನ್ ಎನ್. ಅವರು ಉಡುಪಿಯ ಮಲ್ಪೆಯ ಎ.ಎಂ.ಎಫ್. ಫಿಶ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಂಪನಿಯ ಮ್ಯಾನೇಜರ್ ಮೂಲಕ ಸಂದೇಶ್ ಶೆಟ್ಟಿ ಹಾಗೂ ವಿಶಾಲ್ ಬಂಗೇರ ಅವರ ಪರಿಚಯವಾಗಿತ್ತು. ಬಳಿಕ ಫಿಶ್ ಟ್ರಾನ್ಸ್‌ಪೋರ್ಟ್ ವ್ಯವಹಾರಕ್ಕೆ ಬ್ಯಾಂಕ್ ಕರೆಂಟ್ ಖಾತೆ ಅಗತ್ಯವಿದೆ ಎಂದು ನಂಬಿಸಿ, ರುಮಾನ್ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಿಸಿಕೊಂಡು ಅದರ ಪಾಸ್‌ಬುಕ್, ಚೆಕ್‌ಬುಕ್ ಮತ್ತು ಇತರ ದಾಖಲೆಗಳನ್ನು ತಮ್ಮ ವಶಕ್ಕೆ ಪಡೆದಿದ್ದರು ಎನ್ನಲಾಗಿದೆ. ನಂತರ ಆರೋಪಿಗಳು ರುಮಾನ್ ಅವರನ್ನು ಕೋಲ್ಕತ್ತಾಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಮೊಬೈಲ್‌ಗೆ ಬರುವ ಓಟಿಪಿ ಪಡೆದು ಅವರ ಖಾತೆಯನ್ನು ಬಳಸಿಕೊಂಡು ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಅನುಮಾನಗೊಂಡ ರುಮಾನ್ ಬ್ಯಾಂಕ್‌ಗಳಿಗೆ ವಿಚಾರಿಸಿದಾಗ ತನ್ನ ಖಾತೆಯಲ್ಲಿ ದೊಡ್ಡ ಮೊತ್ತದ ಹಣ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಉಡುಪಿ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿ ಸಂದೇಶ್ ಶೆಟ್ಟಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.



