ಉಡುಪಿ: ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ಹಿತದೃಷ್ಟಿಯಿಂದ ಮದ್ಯ ಮಾರಾಟಕ್ಕೆ ತಾತ್ಕಾಲಿಕ ನಿಷೇಧ ವಿಧಿಸಲಾಗಿದೆ.

ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯ ಮಾರಾಟ) ನಿಯಮಗಳು–1968 ರ ನಿಯಮ 3 ರಡಿ ನೀಡಿರುವ ಮದ್ಯ ಮಾರಾಟದ ಪರವಾನಗಿಯನ್ನು ಹೊಂದಿರುವ ಅಂಗಡಿಗಳನ್ನು ಕರ್ನಾಟಕ ಅಬಕಾರಿ ಕಾಯ್ದೆ–1965 ರ ನಿಯಮ 21 ಅನ್ವಯ ನೀಡಿರುವ ಅಧಿಕಾರದಂತೆ ಫೆಬ್ರವರಿ 16 ರಂದು ಬೆಳಿಗ್ಗೆ 6 ಗಂಟೆಯಿಂದ ಫೆಬ್ರವರಿ 17 ರಂದು ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಈ ಅವಧಿಯಲ್ಲಿ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ ಮತ್ತು ರೆಸ್ಟೋರೆಂಟ್ಗಳು ಹಾಗೂ ವೈನ್ ಶಾಪ್ಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಜೊತೆಗೆ ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫೆಬ್ರವರಿ 16 ರಂದು ಒಣ ದಿನ ಎಂದು ಘೋಷಿಸಲಾಗಿದೆ. ಈ ಕುರಿತು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶ ಹೊರಡಿಸಿದ್ದಾರೆ.



