ಉಡುಪಿ: ಮಧ್ಯಪ್ರಾಚ್ಯದಲ್ಲಿ ಇರಾನ್–ಇಸ್ರೇಲ್–ಅಮೆರಿಕ ನಡುವಿನ ಯುದ್ಧ ಪರಿಸ್ಥಿತಿಯ ಹಿನ್ನೆಲೆ ದೇಶದ ಹಲವು ಭಾಗಗಳಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವ ಲಕ್ಷಣಗಳು ಕಾಣಿಸುತ್ತಿದ್ದು, ಅದರ ಪರಿಣಾಮ ಈಗ ರಾಜ್ಯದಲ್ಲಿಯೂ ಕಂಡುಬರುತ್ತಿದೆ. ವಿಶೇಷವಾಗಿ ಕಮರ್ಷಿಯಲ್ ಅಡುಗೆ ಅನಿಲದ ಕೊರತೆ ಉಂಟಾಗಿರುವುದರಿಂದ ಹೋಟೆಲ್ ಮಾಲಕರು ಹಾಗೂ ದೇವಸ್ಥಾನಗಳು ಸಂಕಷ್ಟ ಅನುಭವಿಸುತ್ತಿದ್ದು, ಇದೀಗ ಇದರ ಬಿಸಿ ಕರಾವಳಿ ಭಾಗದ ಪ್ರಮುಖ ಉದ್ಯಮವಾದ ಮೀನುಗಾರಿಕೆಗೆ ತಟ್ಟಿದೆ.

ಕರಾವಳಿ ಭಾಗದಲ್ಲಿ ಕಾರ್ಯನಿರ್ವಹಿಸುವ 370 ಮತ್ತು ಪರ್ಸಿನ್ ಬೋಟ್ ಮೀನುಗಾರರು ಸಮುದ್ರಕ್ಕೆ ತೆರಳುವ ವೇಳೆ ಕಮರ್ಷಿಯಲ್ ಅಡುಗೆ ಅನಿಲ ಸಿಲಿಂಡರ್ಗಳನ್ನು ಬಳಸುತ್ತಾರೆ. ಒಮ್ಮೆ ಸಮುದ್ರಕ್ಕೆ ತೆರಳಿದರೆ ಎರಡು–ಮೂರು ದಿನಗಳ ಕಾಲ ಸಮುದ್ರ ಮಧ್ಯೆಯೇ ಮೀನುಗಾರಿಕೆ ನಡೆಸುವ ಕಾರಣ ಅಲ್ಲಿ ಆಹಾರ ತಯಾರಿಸಲು ಅಡುಗೆ ಅನಿಲ ಅತ್ಯಗತ್ಯವಾಗಿರುತ್ತದೆ. ಆದರೆ ಇತ್ತೀಚೆಗೆ ಕಮರ್ಷಿಯಲ್ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಮೀನುಗಾರರು ಅನಿಲ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಮುದ್ರಕ್ಕೆ ತೆರಳುವ ಕಾರ್ಯದಲ್ಲೂ ಅಡಚಣೆ ಉಂಟಾಗುತ್ತಿದ್ದು, ಮೀನುಗಾರಿಕೆಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

ಇತ್ತೀಚಿನ ತಿಂಗಳಲ್ಲಿ ಸ್ವಲ್ಪ ಚೇತರಿಕೆ ಕಂಡಿದ್ದ ಮೀನುಗಾರಿಕೆ ಕ್ಷೇತ್ರಕ್ಕೆ ಈಗ ಅಡುಗೆ ಅನಿಲ ಕೊರತೆ ಮತ್ತೊಂದು ದೊಡ್ಡ ಸಮಸ್ಯೆಯಾಗಿ ಎದುರಾಗಿದೆ. ಪರಿಸ್ಥಿತಿ ಮುಂದುವರಿದರೆ ಮೀನುಗಾರರ ಆದಾಯಕ್ಕೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಸಂಬಂಧಿತ ಇಲಾಖೆ ತಕ್ಷಣ ಕ್ರಮ ಕೈಗೊಂಡು ಕಮರ್ಷಿಯಲ್ ಅಡುಗೆ ಅನಿಲ ಪೂರೈಕೆಯನ್ನು ಸರಿಪಡಿಸಬೇಕು ಎಂಬ ಒತ್ತಾಯ ಮೀನುಗಾರರಿಂದ ಕೇಳಿಬರುತ್ತಿದೆ.



