ಉಡುಪಿ : ರಾಷ್ಟ್ರೀಯ ಹೆದ್ದಾರಿ–66ರ ಉಳಿಯಾರಗೋಳಿ ಸಮೀಪದ ದಂಡತೀರ್ಥ ಮತ್ತು ಕೋತಲಕಟ್ಟೆ ಬಳಿ ಸುಮಾರು 15 ನಿಮಿಷಗಳ ಅಂತರದಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ಕು ವಾಹನಗಳು ಜಖಂಗೊಂಡಿದ್ದು, ಶಾಲಾ ಬಾಲಕ ಸೇರಿದಂತೆ ಮೂವರು ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.

ದಂಡತೀರ್ಥ ಬಳಿ ಬೈಕ್ ಒಂದು ಕಾರಿಗೆ ಢಿಕ್ಕಿ ಹೊಡೆದ ಬಳಿಕ ನಿಯಂತ್ರಣ ತಪ್ಪಿ ಪ್ಲೇ ಸ್ಕೂಲ್ನಿಂದ ಮಗುವನ್ನು ಕರೆದುಕೊಂಡು ಹೋಗಲು ಬಸ್ಗಾಗಿ ಕಾಯುತ್ತಿದ್ದ ತಾಯಿ–ಮಗುವಿನತ್ತ ದೌಡಾಯಿಸಿದೆ. ಅಪಘಾತದಲ್ಲಿ ಸ್ಥಳೀಯ ಶಾಲೆಯ ಎಲ್.ಕೆ.ಜಿ ವಿದ್ಯಾರ್ಥಿ ಗೌರವ್ ಹಾಗೂ ಬೈಕ್ ಸವಾರ, ಪಶು ಸಂಜೀವಿನಿ ಸಿಬ್ಬಂದಿ ಮಹೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯರು ಉಡುಪಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಲ್ಲಿ ಕಾರು ಮತ್ತು ಬೈಕ್ ಜಖಂಗೊಂಡಿವೆ.

ಇದಕ್ಕೂ ಸ್ವಲ್ಪ ಹೊತ್ತಿನ ಬಳಿಕ ಕೋತಲಕಟ್ಟೆ ಬಳಿ ಉಡುಪಿಯತ್ತ ತೆರಳುತ್ತಿದ್ದ ಕಾರು ಮತ್ತು ಆಟೋ ರಿಕ್ಷಾ ಪರಸ್ಪರ ಢಿಕ್ಕಿ ಹೊಡೆದುಕೊಂಡಿದ್ದು, ಎರಡೂ ವಾಹನಗಳು ಹಾನಿಗೊಂಡಿವೆ. ಅಪಘಾತದಲ್ಲಿ ರಿಕ್ಷಾ ಚಾಲಕನ ತಲೆಗೆ ಗಾಯವಾಗಿದೆ. ಢಿಕ್ಕಿಯ ಪರಿಣಾಮ ರಿಕ್ಷಾ ರಸ್ತೆಗೆ ಬಿದ್ದು ಅದರಲ್ಲಿದ್ದ ಮಾವಿನಕಾಯಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿವೆ. ಗಾಯಾಳುವನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಕಾಪು ಪೊಲೀಸರು ಎರಡು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.



