ಉಡುಪಿ : ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಸಂಪೂರ್ಣವಾಗಿ ಹಾನಿಯಾದ ಘಟನೆ ಗಂಗೊಳ್ಳಿ ಗ್ರಾಮದ ಸಾಂತಯ್ಯನಕೇರಿ ಪ್ರದೇಶದ ಬೇಲಿ ಕೊಡೇರಿ ಮನೆಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.

ಬೆಂಕಿ ತಗುಲಿದ ಪರಿಣಾಮ ಇಲ್ಲಿನ ಕೊಡೇರಿ ಮನೆ ನಿವಾಸಿ ಜಲಜಾ ಪೂಜಾರ್ತಿ ಅವರ ಮನೆ ಸಂಪೂರ್ಣವಾಗಿ ಹಾನಿಗೀಡಾಗಿದೆ. ಮನೆಯೊಳಗಿನ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಅನೇಕ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಬೆಂಕಿಯ ತೀವ್ರತೆಗೆ ಮನೆಯ ಗೋಡೆಗಳಲ್ಲಿ ಬಿರುಕು ಬಿದ್ದು, ಒಂದು ಭಾಗದ ಗೋಡೆ ಕುಸಿದು ಬಿದ್ದಿದೆ. ಈ ಘಟನೆಯಿಂದ ಅಂದಾಜು ಸುಮಾರು ₹6 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಘಟನೆ ಸಂಭವಿಸಿದ ವೇಳೆ ಜಲಜಾ ಪೂಜಾರ್ತಿ ಸಮುದ್ರಕ್ಕೆ ಮಳಿ ತೆಗೆಯಲು ತೆರಳಿದ್ದರಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಬೆಂಕಿ ಕಾಣಿಸಿಕೊಂಡ ತಕ್ಷಣ ಅಕ್ಕಪಕ್ಕದ ನಿವಾಸಿಗಳು, ಗಂಗೊಳ್ಳಿ ಶೌರ್ಯ ವಿಪತ್ತು ನಿರ್ವಹಣ ಘಟಕದ ಸದಸ್ಯರು ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.



