Friday, March 6, 2026

spot_img

ಸಾಲ ಗ್ಯಾರಂಟಿ ಬಜೆಟ್ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಟೀಕೆ

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026–27ನೇ ಸಾಲಿನ ರಾಜ್ಯ ಬಜೆಟ್‌ನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ‘ಸಾಲ ಗ್ಯಾರಂಟಿ ಬಜೆಟ್ ಎಂದು ಟೀಕಿಸಿದ್ದಾರೆ. ಮುಖ್ಯಮಂತ್ರಿಗಳು 17ನೇ ಬಾರಿ ಬಜೆಟ್ ಮಂಡಿಸಿರುವುದು ದಾಖಲೆ ಆಗಿದ್ದರೂ, ಎಲ್ಲೋ ಸಾಲ ಮಾಡಿಯಾದರೂ ಅಧಿಕಾರಕ್ಕೆ ಅಂಟಿಕೊಳ್ಳುವ ಪ್ರಯತ್ನದಂತೆಯೇ ಈ ಬಜೆಟ್ ಕಾಣುತ್ತಿದೆ ಎಂದು ಅವರು ತಿಳಿಸಿದ್ದಾರೆ.

 ರಾಜ್ಯದ ಒಟ್ಟು ಸಾಲವು ಈಗಾಗಲೇ ಸುಮಾರು ರೂ. 8,24,389 ಕೋಟಿಗೆ ಏರಿಕೆಯಾಗಿದೆ. ಆದರೆ ಬಜೆಟ್ ಗಾತ್ರ ಕೇವಲ 4.48 ಲಕ್ಷ ಕೋಟಿ ರೂಪಾಯಿ ಮಾತ್ರವಾಗಿದೆ. ಈ ಸಾಲಿನ ಬಹಿರಂಗ ಮಾರುಕಟ್ಟೆ ಸಾಲವೇ ರೂ. 1,22,340 ಕೋಟಿ ಇರುವುದರಿಂದ ರಾಜ್ಯವನ್ನು ಯಾವ ದಿಕ್ಕಿಗೆ ಕೊಂಡೊಯ್ಯಲಾಗುತ್ತಿದೆ ಎಂಬ ಪ್ರಶ್ನೆ ಮೂಡುತ್ತದೆ ಎಂದು ಅವರು ಹೇಳಿದ್ದಾರೆ. ಕೇಂದ್ರ ಬಜೆಟ್ ಬಂದಾಗ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಸುಳ್ಳು ಲೆಕ್ಕ ನೀಡಿ ಜನರನ್ನು ತಪ್ಪು ದಾರಿಗೆಳೆಯುವ ಸರ್ಕಾರ, ಇದೀಗ ತನ್ನ ಬಜೆಟ್‌ನಲ್ಲಿ ಒಂದು ಸಮುದಾಯಕ್ಕೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ ಎಂದು ಅವರು ಆರೋಪಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಂಬಂಧಿಸಿದ ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಿರುವುದನ್ನು ಉಲ್ಲೇಖಿಸಿದ ಅವರು, ವಕ್ಫ್ ಆಸ್ತಿ ಅಭಿವೃದ್ಧಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯ, ಹಜ್ ಭವನ ನಿರ್ಮಾಣ, ನಿರುದ್ಯೋಗಿಗಳಿಗೆ ಸಹಾಯಧನ, ಅಲ್ಪಸಂಖ್ಯಾತ ಕಾಲೋನಿಗಳ ಅಭಿವೃದ್ಧಿಗೆ ನೂರಾರು ಕೋಟಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಹಾಗೂ ಶಾಲೆಗಳ ಅಭಿವೃದ್ಧಿಗೆ 1,000 ಕೋಟಿ ರೂಪಾಯಿ ಸೇರಿದಂತೆ ಅನೇಕ ಯೋಜನೆಗಳನ್ನು ಘೋಷಿಸಲಾಗಿದೆ ಎಂದು ಹೇಳಿದರು. ಇದರಿಂದ ಬಹುಸಂಖ್ಯಾತ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ ಅವರು, ಈ ರಾಜ್ಯದಲ್ಲಿ ಬಹುಸಂಖ್ಯಾತರು ಪ್ರಜೆಗಳಲ್ಲವೇ? ಎಂದು ಪ್ರಶ್ನಿಸಿದರು.

ಇದಲ್ಲದೆ ಕರಾವಳಿ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು, ಕೇವಲ ಎರಡು ಪೊಲೀಸ್ ಠಾಣೆಗಳ ಘೋಷಣೆ ಮಾತ್ರ ಈ ಭಾಗಕ್ಕೆ ದೊರೆತ ಪ್ರಮುಖ ಯೋಜನೆ ಎಂದು ಅವರು ಟೀಕಿಸಿದರು. ರಾಜ್ಯದ ರೈತರು, ವಿದ್ಯಾರ್ಥಿಗಳು, ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರು, ಬಡವರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ಜನರನ್ನು ನಿರ್ಲಕ್ಷಿಸಿ ಕೇವಲ ಒಂದು ಸಮುದಾಯವನ್ನು ಪರಿಗಣಿಸಿರುವ ಬಜೆಟ್ ಇದಾಗಿದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles