ಉಡುಪಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6ರಂದು ವಿಧಾನಸೌಧದಲ್ಲಿ ಮಂಡಿಸಲಿರುವ 2026–27ನೇ ಸಾಲಿನ ರಾಜ್ಯ ಬಜೆಟ್ ಭಾಷಣವನ್ನು ರಾಜ್ಯದ ಆಯ್ದ ಬಸ್ ನಿಲ್ದಾಣಗಳಲ್ಲಿ ಎಲ್‌ಇಡಿ ಹಾಗೂ ಟಿವಿ ಪರದೆಗಳ ಮೂಲಕ ಮೊತ್ತ ಮೊದಲ ಬಾರಿಗೆ ನೇರ ಪ್ರಸಾರ ಮಾಡಲಾಗುತ್ತದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ. ಆರ್ಥಿಕ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ 17ನೇ ಬಾರಿ ಬಜೆಟ್ ಮಂಡಿಸಲಿದ್ದು, ಇದರೊಂದಿಗೆ ಹೊಸ ದಾಖಲೆ ನಿರ್ಮಿಸಲಿದ್ದಾರೆ. ಈ ಮಹತ್ವದ ಬಜೆಟ್ ಭಾಷಣವನ್ನು ರಾಜ್ಯದ ಜನತೆಗೆ ತಲುಪಿಸುವ ಉದ್ದೇಶದಿಂದ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಡಿಐಪಿಆರ್)ವು ಬೆಂಗಳೂರು ಮೂಲದ ವೃತ್ತಿ ಮೀಡಿಯಾ ಸಲ್ಯೂಷನ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯದಾದ್ಯಂತ ಇರುವ ಸುಮಾರು 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಅಳವಡಿಸಿರುವ ಡಿಜಿಟಲ್ ಡಿಸ್ಪ್ಲೇ (ಎಲ್‌ಇಡಿ) ಹಾಗೂ ಟಿವಿ ಪರದೆಗಳ ಮೂಲಕ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ಮಾರ್ಚ್ 6ರಂದು ಬೆಳಿಗ್ಗೆ 10.15 ಗಂಟೆಯಿಂದ ಪ್ರಸಾರ ಮಾಡಲಿದೆ.

ವಿಧಾನಸೌಧದಲ್ಲಿ ನಡೆಯುವ ಬಜೆಟ್ ಮಂಡನೆಯ ಜೊತೆಗೆ ನಂತರ ನಡೆಯಲಿರುವ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿಯನ್ನೂ ಇದೇ ಪರದೆಗಳ ಮೂಲಕ ರಾಜ್ಯದ ವಿವಿಧ ಬಸ್ ನಿಲ್ದಾಣಗಳಲ್ಲಿ ನೇರವಾಗಿ ಪ್ರಸಾರ ಮಾಡಲಾಗುತ್ತದೆ. ಇದರ ಮೂಲಕ ಸಾರ್ವಜನಿಕರು ಬಸ್ ನಿಲ್ದಾಣಗಳಲ್ಲಿಯೇ ಬಜೆಟ್ ಭಾಷಣ ಹಾಗೂ ಸಂಬಂಧಿತ ಕಾರ್ಯಕ್ರಮಗಳನ್ನು ವೀಕ್ಷಿಸುವ ಅವಕಾಶವನ್ನು ಪಡೆಯಲಿದ್ದಾರೆ.

ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳ ಮೂಲಕ ಜನಸಾಮಾನ್ಯರಿಗೆ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ತಲುಪಿಸುವ ಪ್ರಯತ್ನವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೈಗೊಂಡಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಯುಕ್ತರು ಮನವಿ ಮಾಡಿದ್ದಾರೆ.



