ಉಡುಪಿ : ಕರಾವಳಿ ಭಾಗದ ಯಾವುದೇ ಪ್ರಮುಖ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದನೆ ನೀಡಿಲ್ಲ ಎಂದು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಆರೋಪಿಸಿದರು. ಕಾರ್ಕಳದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಮಂಡಿಸಲಿರುವ ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದರು.

ಕರಾವಳಿ ಭಾಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಯಾವುದೇ ರೀತಿಯ ಸ್ಪಷ್ಟ ಕ್ರಮಗಳು ಕಾಣುತ್ತಿಲ್ಲ. ಅನುದಾನ ನೀಡುವುದು ದೂರದ ಮಾತು, ಅಗತ್ಯವಿರುವ ಕೆಲವು ನಿಯಮಾವಳಿಗಳನ್ನೂ ಸಹ ಸರ್ಕಾರ ಸಡಿಲಗೊಳಿಸಿಲ್ಲ ಎಂದು ಅವರು ಟೀಕಿಸಿದರು. ಇದರಿಂದಾಗಿ ಕರಾವಳಿ ಭಾಗದ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳು ಅಸ್ತವ್ಯಸ್ತವಾಗಿವೆ ಎಂದು ಹೇಳಿದರು.

ಕರಾವಳಿ ಪ್ರದೇಶದ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರದ ನಿರ್ಲಕ್ಷ್ಯದಿಂದ ಅವರ ಬದುಕು ಅತಂತ್ರವಾಗಿದೆ. ಮೀನುಗಾರರು, ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳ ಕಾರ್ಮಿಕರಿಗೆ ಸರ್ಕಾರದಿಂದ ಅಗತ್ಯ ನೆರವು ದೊರಕಿಲ್ಲ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಈ ವರ್ಷದ ಬಜೆಟ್ನಿಂದ ಕರಾವಳಿ ಭಾಗದ ಜನತೆಗೆ ಯಾವುದೇ ವಿಶೇಷ ನಿರೀಕ್ಷೆ ಇಲ್ಲ ಎಂದು ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.

ಸರ್ಕಾರ ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜನ ನೀಡುವ ಬದಲು ಖಾಲಿ ಭರವಸೆಗಳನ್ನು ನೀಡುತ್ತಿದೆ. ಹೀಗಾಗಿ ಈ ಬಜೆಟ್ ಜನರ ಬದುಕಿಗೆ ಯಾವುದೇ ಪ್ರಯೋಜನ ತರದ ‘ಬೊಗಳೆ ಬಜೆಟ್’ ಆಗಲಿದೆ ಎಂದು ಅವರು ವಾಗ್ದಾಳಿ ನಡೆಸಿದರು. ಇದು ಇಡೀ ರಾಜ್ಯಕ್ಕೆ ಚೊಂಬು ನೀಡುವಂತ ಬಜೆಟ್ ಆಗಬಹುದು ಎಂದು ಸುನಿಲ್ ಕುಮಾರ್ ಕಿಡಿಕಾರಿದರು.



