ಉಡುಪಿ : ಕಾಪು ಕ್ಷೇತ್ರದ ಜನತೆ ಕಾಂಗ್ರೆಸ್ ನಾಯಕ ವಿನಯ್ ಕುಮಾರ್ ಸೊರಕೆಯವರನ್ನು ರಾಜಕೀಯವಾಗಿ ತಿರಸ್ಕರಿಸಿದ್ದು, ಅವರನ್ನು ನೆನಪಿನ ಸಮಾಧಿಯಲ್ಲಿ ಹೂತು ಹಾಕಿದಂತಾಗಿದೆ ಎಂದು ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾಪು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಶೆಟ್ಟಿ ಗುರ್ಮೆ ಅವರನ್ನು ಜನತೆ ಗೆಲ್ಲಿಸಿರುವುದರಿಂದ ಸೊರಕೆಯವರು ಸೋಲಿನ ಹತಾಶೆಯಿಂದ ಹೊಲಸು ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಕ್ಷೇತ್ರದಾದ್ಯಂತ ಪಕ್ಷಾತೀತವಾಗಿ ಕೆಲಸ ಮಾಡುತ್ತಿರುವ ಶಾಸಕ ಸುರೇಶ್ ಶೆಟ್ಟಿಯವರ ಘನತೆಗೆ ಕಪ್ಪು ಮಸಿ ಬಳಿಯಲು ಸೊರಕೆಯವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ದೇವಸ್ಥಾನಗಳ ವ್ಯವಸ್ಥಾಪನ ಸಮಿತಿಗೆ ಸದಸ್ಯರ ಆಯ್ಕೆ ವಿಚಾರದಲ್ಲೂ ಸೊರಕೆಯವರ ವಿರುದ್ಧ ಜಿತೇಂದ್ರ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇವಸ್ಥಾನದ ಬಾಗಿಲ ಬಳಿಯೂ ಬಾರದವರನ್ನು ಸಮಿತಿಗೆ ಆಯ್ಕೆ ಮಾಡಲಾಗುತ್ತಿದ್ದು, ಇದರಿಂದ ದೇವಾಲಯಗಳ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂದು ಅವರು ಹೇಳಿದರು.ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆಯ ಅಂಗವಾಗಿ ಕಾಪು ಬೀಚ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿದ್ದ ಬಿಜೆಪಿ ಧ್ವಜ ಹಾಗೂ ಬ್ಯಾನರ್‌ಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ ಎಂದು ಅವರು ಆರೋಪಿಸಿದರು.

ಪೆರ್ಡೂರು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ರಾಜಕೀಯ ರಹಿತವಾಗಿ ನಡೆಸಲು ಶಾಸಕ ಸುರೇಶ್ ಶೆಟ್ಟಿಯವರು ಯೋಜಿಸಿದ್ದರು. ಆದರೆ ಗೊಂದಲ ಸೃಷ್ಟಿಸಿ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗದಂತೆ ಮಾಡಲು ಸೊರಕೆಯವರು ಹುನ್ನಾರ ನಡೆಸಿದ್ದಾರೆ ಎಂದು ಜಿತೇಂದ್ರ ಶೆಟ್ಟಿ ದೂರಿದರು. ಸೊರಕೆಯವರು ಕಳೆದ ಎರಡು ವರ್ಷಗಳಿಂದ ಸುಳ್ಳು ಆರೋಪಗಳನ್ನು ಮಾಡುತ್ತಾ ಅಪಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದ ಜನತೆಗೆ ಅವರು ಮಾಡಿದ ಅನ್ಯಾಯಗಳ ಪಟ್ಟಿಯನ್ನು ಬಿಜೆಪಿ ಶೀಘ್ರದಲ್ಲೇ ಬಹಿರಂಗಪಡಿಸಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



