ಉಡುಪಿ : ಯಕ್ಷಗಾನ ಕಲಾರಂಗದ ಸಾಮಾಜಿಕ ಸೇವಾ ಕಾರ್ಯಗಳ ಭಾಗವಾಗಿ ನಿರ್ಮಿಸಲಾದ 90ನೇ ಮನೆಯನ್ನು ಗಂಗೊಳ್ಳಿಯ ವಿದ್ಯಾಪೋಷಕ್ ವಿದ್ಯಾರ್ಥಿನಿ ಶ್ರಾವ್ಯ ಖಾರ್ವಿಗೆ ಹಸ್ತಾಂತರಿಸಲಾಯಿತು. ಬೈಂದೂರು ತಾಲೂಕಿನ ಗಂಗೊಳ್ಳಿಯ ನಿವಾಸಿಯಾದ ಶ್ರಾವ್ಯ ಖಾರ್ವಿ (ದ್ವಿತೀಯ ಪಿಯುಸಿ ವಿದ್ಯಾರ್ಥಿನಿ), ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 97% ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿನಿ. ಕಳೆದ ವರ್ಷ ಜುಲೈ ತಿಂಗಳಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ತಂದೆಯನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಈಕೆಯ ಕುಟುಂಬಕ್ಕೆ ಆಶ್ರಯವಾಗಿ, ಕುಂದಾಪುರದ ವಸಂತ ಆಚಾರ್ಯ ಅವರು ತಮ್ಮ ತಾಯಿಯವರ ಸ್ಮರಣಾರ್ಥವಾಗಿ 7 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ‘ಸರಸ್ವತಿ ಕೃಪಾ’ ನೂತನ ಮನೆಯನ್ನು ಹಸ್ತಾಂತರಿಸಲಾಯಿತು.

ನೂತನ ಮನೆಯನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯಕ್ಷಗಾನ ಕಲಾರಂಗ ಅಕ್ಷರಾರ್ಥದಲ್ಲಿ ನೊಂದವರ ಬಾಳಿಗೆ ಬೆಳಕಾಗುತ್ತಿದೆ ಎಂದು ಶ್ಲಾಘಿಸಿದರು. ತಂದೆಯನ್ನು ಕಳೆದುಕೊಂಡು ಕಂಗಾಲಾಗಿದ್ದ ಶ್ರಾವ್ಯಳ ಕುಟುಂಬಕ್ಕೆ ಧೈರ್ಯ ತುಂಬಿ, ಆಶ್ರಯ ನೀಡಿರುವುದು ಶ್ಲಾಘನೀಯ ಕಾರ್ಯ ಎಂದರು. ಪ್ರಾಯೋಜಕರಾದ ವಸಂತ ಆಚಾರ್ಯ ಹಾಗೂ ಅವರ ಪತ್ನಿ ಶೋಭಾ ಆಚಾರ್ಯ ಮಾತನಾಡಿ, ಕಲಾರಂಗದ ಮೂಲಕ ಪುಣ್ಯ ಕಾರ್ಯದಲ್ಲಿ ಭಾಗಿಯಾಗಲು ಅವಕಾಶ ದೊರೆತಿದೆ. ಇದರಿಂದ ತಾಯಿಯವರ ನೆನಪು ಸಾರ್ಥಕವಾಗಿದೆ. ಪ್ರತಿಭಾವಂತ ಹಾಗೂ ಅರ್ಹ ವಿದ್ಯಾರ್ಥಿನಿಗೆ ಮನೆ ನಿರ್ಮಿಸುವ ಅವಕಾಶ ಸಿಕ್ಕಿದ್ದು ಸಂತೋಷ ತಂದಿದೆ. ಶ್ರಾವ್ಯಳ ಮುಂದಿನ ಶಿಕ್ಷಣದ ವೆಚ್ಚವನ್ನೂ ನಾವು ಹೊರುತ್ತೇವೆ ಎಂದು ಭರವಸೆ ನೀಡಿದರು.

ಯು.ಎಸ್. ರಾಜಗೋಪಾಲ ಆಚಾರ್ಯ ಶುಭ ಹಾರೈಸಿದರು. ವೇದಿಕೆಯಲ್ಲಿ ಗಣೇಶ್ ಆಚಾರ್ಯ, ಸುರೇಶ್ ಆಚಾರ್ಯ, ದಿನೇಶ್ ಆಚಾರ್ಯ, ಉಷಾ ನಾಗೇಶ್ ಆಚಾರ್ಯ, ಸಿದ್ಧಾರ್ಥ ಆಚಾರ್ಯ ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಾದ ಪ್ರೊ. ಕೆ. ಸದಾಶಿವ ರಾವ್, ವಿಜಯಕುಮಾರ್ ಮುದ್ರಾಡಿ, ಅನಂತರಾಜ ಉಪಾಧ್ಯಾಯ, ಅಶೋಕ ಎಂ., ಜಯರಾಮ ಪಡಿಯಾರ್, ಗಣೇಶ್ ಬ್ರಹ್ಮಾವರ, ಪ್ರಭಾಕರ ಬಂಡಿ, ವಿನೋದಾ ಎಂ., ಉಪನ್ಯಾಸಕ ನರೇಂದ್ರ, ಪತ್ರಕರ್ತ ರಾಘವೇಂದ್ರ ಪೈ, ಶೋಭಾ ಸುವರ್ಣ, ಮಾನ್ವೀ ಹಾಗೂ ಊರಿನ ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ಗಂಗೊಳ್ಳಿಯ ವಿದ್ಯಾಪೋಷಕ್ ವಿದ್ಯಾರ್ಥಿನಿಯರಾದ ನಿಸರ್ಗ, ಮನೀಷಾ, ಅಮೂಲ್ಯ, ಮಾನ್ಯ ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.



