ಉಡುಪಿ : ವಿದೇಶದಿಂದ ಗಿಫ್ಟ್ ಕೋರಿಯರ್ ಬಂದಿದೆ ಎಂದು ನಂಬಿಸಿ ಮಹಿಳೆಯೊಬ್ಬರಿಂದ ಹಂತ ಹಂತವಾಗಿ 13,99,700 ರೂಪಾಯಿ ಹಣ ವಂಚಿಸಿರುವ ಘಟನೆ ಶಿರ್ವದಲ್ಲಿ ನಡೆದಿದೆ. ಸಂತ್ರಸ್ತೆ ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಸುಮಾರು ಒಂದು ತಿಂಗಳ ಹಿಂದೆ ಮೊಬೈಲ್ ಮೂಲಕ ಮಿಲರ್ ಗೇರ್ ಹಾರ್ಡ್ ಎಂಬ ವ್ಯಕ್ತಿಯೊಂದಿಗೆ ಪರಿಚಯವಾಗಿತ್ತು. ಆತ ತಾನು ವಿದೇಶದಲ್ಲಿದ್ದು ತನ್ನ ಹೆಸರಿನಲ್ಲಿ ಗಿಫ್ಟ್ ಕೋರಿಯರ್ ಕಳುಹಿಸಿರುವುದಾಗಿ ಫೆ.22ರಂದು ತಿಳಿಸಿದ್ದಾನೆ. ಕೋರಿಯರ್ ಪಾರ್ಸೆಲ್‌ನ ಛಾಯಾಚಿತ್ರವನ್ನೂ ವಾಟ್ಸಪ್ ಮೂಲಕ ಕಳುಹಿಸಿದ್ದಾನೆ ಎನ್ನಲಾಗಿದೆ.

ನಂತರ ಅಪರಿಚಿತ ಮಹಿಳೆಯೊಬ್ಬಳು ಕರೆ ಮಾಡಿ, ವಿದೇಶದಿಂದ ಬಂದಿರುವ ಕೋರಿಯರ್ ವಿಮಾನ ನಿಲ್ದಾಣದಲ್ಲಿ ಬಿಡುಗಡೆಗೊಳಿಸಲು 49,700 ರೂಪಾಯಿ ಪಾವತಿಸಬೇಕೆಂದು ತಿಳಿಸಿದ್ದಾಳೆ. ಅದರಂತೆ ಮಹಿಳೆ ಐಡಿಬಿಐ ಬ್ಯಾಂಕ್ ದೆಹಲಿ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಇದಾದ ಬಳಿಕ ಕೋರಿಯರ್‌ನಲ್ಲಿ 30,000 ಪೌಂಡ್ ವಿದೇಶಿ ಕರೆನ್ಸಿ ಇದ್ದು, ಅದು ಕಾನೂನುಬಾಹಿರವಾಗಿರುವುದರಿಂದ ಹೆಚ್ಚುವರಿ ಶುಲ್ಕ ಪಾವತಿಸಬೇಕೆಂದು ಹೇಳಿ 1,89,000 ರೂಪಾಯಿ ಪಡೆದುಕೊಂಡಿದ್ದಾರೆ. ಅಲ್ಲದೆ ಮನಿ ಎಕ್ಸ್‌ಚೇಂಜ್, ಡಾಕ್ಯುಮೆಂಟೇಶನ್ ಸೇರಿದಂತೆ ವಿವಿಧ ನೆಪಗಳಲ್ಲಿ ಬೇರೆ ಬೇರೆ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾಯಿಸಲು ಒತ್ತಾಯಿಸಲಾಗಿದೆ.

ಫೆ.23ರಿಂದ 27ರವರೆಗೆ ಒಟ್ಟು 13,99,700 ರೂಪಾಯಿ ಹಣವನ್ನು ವಂಚಕರು ಪಡೆದಿದ್ದಾರೆ. ಕೋರಿಯರ್‌ನಲ್ಲಿ 30,000 ಪೌಂಡ್ ಇದ್ದು, ಅದು ಭಾರತೀಯ ಕರೆನ್ಸಿಯಲ್ಲಿ ಸುಮಾರು 37 ಲಕ್ಷ ಆಗುತ್ತದೆ ಎಂದು ನಂಬಿಸಿ ಮೋಸ ಮಾಡಿದ್ದಾರೆ. ಯಾವುದೇ ಕೋರಿಯರ್ ಬಂದಿಲ್ಲವೆಂಬುದು ತಿಳಿದು ಬಂದ ನಂತರ ವಿದ್ಯಾ ಅವರು ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.



