ಉಡುಪಿ: ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ರಾಜ್ಯದಾದ್ಯಂತ 2002ರ ಮತದಾರರ ಪಟ್ಟಿಯೊಂದಿಗೆ ಹೊಸದಾಗಿ ಪರಿಷ್ಕೃತ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಪ್ರಕ್ರಿಯೆ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕಿನ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಮೌಲಾ ತಿಳಿಸಿದ್ದಾರೆ.

2002ರ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದವರು, ತಮ್ಮ ವಿವರಗಳು ಪ್ರಸ್ತುತ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಮತದಾರರು ತಮ್ಮ ವಾರ್ಡ್ಗೆ ನಿಯೋಜಿತ ಬೂತ್ ಮಟ್ಟದ ಅಧಿಕಾರಿ (ಬಿ.ಎಲ್.ಒ)ರನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸಿ ತಕ್ಷಣವೇ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಒಂದು ವೇಳೆ 2002ರ ಮತದಾರರ ಪಟ್ಟಿಯಲ್ಲಿ ಸ್ವಂತ ವಿವರಗಳು ಇಲ್ಲದಿದ್ದರೆ, ತಂದೆ–ತಾಯಿ ಅಥವಾ ಅಜ್ಜ–ಅಜ್ಜಿಯರ ವಿವರಗಳನ್ನು ದಾಖಲೆಗಳಾಗಿ ಬಳಸಿಕೊಳ್ಳಬಹುದಾಗಿದೆ. ವಿಶೇಷವಾಗಿ ವಾಸಸ್ಥಳ ಬದಲಿಸಿಕೊಂಡವರು ಹಾಗೂ ವಿವಾಹದ ಬಳಿಕ ಬೇರೆಡೆ ವಾಸ್ತವ್ಯ ಹೊಂದಿರುವ ಮಹಿಳೆಯರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ನಿರ್ಲಕ್ಷ್ಯ ವಹಿಸಿದಲ್ಲಿ ಮುಂದಿನ ದಿನಗಳಲ್ಲಿ ಮತದಾನದ ಹಕ್ಕಿಗೆ ಸಂಬಂಧಿಸಿದ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.

ಈ ಬಗ್ಗೆ ಜಿಲ್ಲಾಧಿಕಾರಿಗಳೂ ಈಗಾಗಲೇ ಅಧಿಕೃತವಾಗಿ ಹೇಳಿಕೆ ನೀಡಿರುವುದನ್ನು ಉಲ್ಲೇಖಿಸಿದ ಅವರು, ಮಸೀದಿ ಹಾಗೂ ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯ ಕುರಿತು ಜನರಲ್ಲಿ ಅರಿವು ಮೂಡಿಸಿ, ಸಂಪೂರ್ಣ ಸಹಕಾರ ನೀಡಬೇಕು ಎಂದು ಕೋರಿದ್ದಾರೆ.



