ಉಡುಪಿ: ತುಳುಕೂಟ ಉಡುಪಿ (ರಿ.) ಹಾಗೂ ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ ಉಡುಪಿ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾದ 24ನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆಯಲ್ಲಿ ಸುಮನಸಾ ಕೊಡವೂರು ತಂಡದ ‘ಯೇಸ’ ನಾಟಕವು ಪ್ರಥಮ ಶ್ರೇಷ್ಠ ನಾಟಕ ಪ್ರಶಸ್ತಿಗೆ ಭಾಜನವಾಯಿತು.

ಸಂಗಮ ಕಲಾವಿದರು ಮಣಿಪಾಲ ತಂಡದ ‘ಮಾಯೊಕದ ಮಣ್ಣಕರ’ ನಾಟಕವು ದ್ವಿತೀಯ ಶ್ರೇಷ್ಠ ನಾಟಕ ಪ್ರಶಸ್ತಿಯನ್ನು ಪಡೆದುಕೊಂಡರೆ, ಮುಂಬಯಿಯ ರಂಗಮಿಲನ ತಂಡದ ‘ನಾಗ ಸಂಪಿಗೆ’ ನಾಟಕವು ತೃತೀಯ ಶ್ರೇಷ್ಠ ನಾಟಕ ಪ್ರಶಸ್ತಿಗೆ ಪಾತ್ರವಾಯಿತು. ಶ್ರೇಷ್ಠ ನಿರ್ದೇಶನ ವಿಭಾಗದಲ್ಲಿ ‘ಯೇಸ’ ನಾಟಕದ ನಿರ್ದೇಶಕ ವಿದ್ದು ಉಚ್ಚಿಲ್ ಅವರಿಗೆ ಪ್ರಥಮ ಸ್ಥಾನ, ‘ಮಾಯೊಕದ ಮಣ್ಣಕರ’ ನಾಟಕದ ನಿರ್ದೇಶಕ ರಮೇಶ್ ಕೆ. ಬೆಣಕಲ್ ಅವರಿಗೆ ದ್ವಿತೀಯ ಸ್ಥಾನ ಹಾಗೂ ‘ನಾಗ ಸಂಪಿಗೆ’ ನಾಟಕದ ನಿರ್ದೇಶಕ ಮನೋಹರ್ ಶೆಟ್ಟಿ ನಂದಳಿಕೆ ಅವರಿಗೆ ತೃತೀಯ ಸ್ಥಾನ ಲಭಿಸಿದೆ.

ಶ್ರೇಷ್ಠ ರಂಗಪರಿಕರ/ಪ್ರಸಾದನ ವಿಭಾಗದಲ್ಲಿ ಸಂಗಮ ಕಲಾವಿದರು ಮಣಿಪಾಲ (ರಿ.) ಪ್ರಥಮ, ಸುಮನಸಾ ಕೊಡವೂರು (ರಿ.), ಉಡುಪಿ ದ್ವಿತೀಯ ಹಾಗೂ ಭೂಮಿಗೀತ ಸಾಂಸ್ಕೃತಿಕ ವೇದಿಕೆ, ಪಟ್ಲ ತೃತೀಯ ಸ್ಥಾನ ಪಡೆದಿವೆ. ‘ಯೇಸ’ ನಾಟಕದ ನಿಖಿಲ್ ಮೈಂದನ್ ಪ್ರಥಮ, ‘ನೆಲ ನೀರದ್ ದುನಿಪು’ ನಾಟಕದ ಪ್ರಥ್ವಿನ್ ಕೆ. (ಉಡುಪಿ) ದ್ವಿತೀಯ ಹಾಗೂ ‘ನಾಗ ಸಂಪಿಗೆ’ ನಾಟಕದ ನಿತಿನ್ ಪೆರಂಪಳ್ಳಿ ತೃತೀಯ ಸ್ಥಾನ ಪಡೆದಿದ್ದಾರೆ. ಶ್ರೇಷ್ಠ ಸಂಗೀತ ವಿಭಾಗದಲ್ಲಿ ‘ಯೇಸ’ ನಾಟಕದ ಶೋಧನ್ ಎರ್ಮಾಳ್ ಪ್ರಥಮ, ‘ಮಾಯೊಕದ ಮಣ್ಣಕರ’ ನಾಟಕದ ಶುಭಕರ ಪುತ್ತೂರು ದ್ವಿತೀಯ ಹಾಗೂ ‘ನಾಗ ಸಂಪಿಗೆ’ ನಾಟಕದ ದಿವಾಕರ್ ಕಟೀಲ್ ತೃತೀಯ ಸ್ಥಾನ ಪಡೆದಿದ್ದಾರೆ.

ಶ್ರೇಷ್ಠ ನಟ ವಿಭಾಗದಲ್ಲಿ ‘ಮಾಯೊಕದ ಮಣ್ಣಕರ’ ನಾಟಕದ ‘ಅಡ್ಕ’ ಪಾತ್ರಧಾರಿ ಸಂತೋಷ್ ಶೆಟ್ಟಿ (ಹಿರಿಯಡ್ಕ) ಪ್ರಥಮ, ‘ಮುಗಿಯಂದಿ ಕಥೆ’ ನಾಟಕದ ವಿಜಯ ಪಾತ್ರಧಾರಿ ಮಂಜುನಾಥ್ ಆಚಾರ್ಯ (ಕುಂಜೂರು) ದ್ವಿತೀಯ ಹಾಗೂ ‘ಯೇಸ’ ನಾಟಕದ ಸಜ್ಜನ ಹೇಮಂತ್ ಪಾತ್ರಧಾರಿ ಕಿರಣ್ ಭಟ್ ತೃತೀಯ ಸ್ಥಾನ ಗಳಿಸಿದ್ದಾರೆ.ಶ್ರೇಷ್ಠ ನಟಿ ವಿಭಾಗದಲ್ಲಿ ‘ಯೇಸ’ ನಾಟಕದ ಸತ್ಯಶ್ರೀ ಪಾತ್ರಧಾರಿಣಿ ಸೌಭಾಗ್ಯ ಲಕ್ಷ್ಮೀ ಪ್ರಥಮ, ‘ಮುಗಿಯಂದಿ ಕಥೆ’ ನಾಟಕದ ಕುಸುಮಾ ಪಾತ್ರಧಾರಿಣಿ ಕುಸುಮಾ ಕಾಮತ್ (ಕರ್ವಾಲ್) ದ್ವಿತೀಯ ಹಾಗೂ ‘ಮಾಯೊಕದ ಮಣ್ಣಕರ’ ನಾಟಕದ ಮುಡ್ಕ ಪಾತ್ರಧಾರಿಣಿ ವೈಷ್ಣವಿ ಭಂಡಾರ್ಕರ್ ತೃತೀಯ ಸ್ಥಾನ ಪಡೆದಿದ್ದಾರೆ.

ನಟ/ನಟಿಯರ ವಿಭಾಗದಲ್ಲಿ ದಿನೇಶ್ ಅಮೀನ್ (ಕದಿಕೆ), ಶಿವಪ್ಪ ಬಿರುವ (ಗುರುವಾಯನಕೆರೆ), ಸಚಿನ್ (ಬಿವಂಡಿ), ಅನಿಲ್ ಕುಮಾರ್ (ಶಂಕರಪುರ), ಕಾರ್ತಿಕ್ ಪ್ರಭು, ಭುವನ್ (ಮಣಿಪಾಲ್), ದೀಕ್ಷಾ ದೇವಾಡಿಗ, ಚಂದ್ರಕಲಾ ರಾವ್ (ಕದಿಕೆ), ವಸುಪ್ರದ, ನಮ್ರತಾ ಸೇರಿದಂತೆ ಹಲವು ಕಲಾವಿದರು ತೀರ್ಪುಗಾರರ ಮೆಚ್ಚುಗೆ ಪಡೆದರು. ಬಾಲನಟ/ನಟಿಯರ ವಿಭಾಗದಲ್ಲಿ ಪ್ರಣವ್ ಆಚಾರ್ಯ, ಪ್ರಾಪ್ತಿ ಆಚಾರ್ಯ, ಮೃಣಾಲ್ ಪ್ರಕಾಶ್ ಹಾಗೂ ವಿಶಾಂತ್ ಅವರಿಗೆ ಪ್ರಶಸ್ತಿ ಲಭಿಸಿದೆ. 24ನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಖ್ಯಾತ ರಂಗಕರ್ಮಿಗಳಾದ ಮೋಹನ್ ಶೆಣಿ, ಗಂಗಾಧರ ಪಣಿಯೂರು ಹಾಗೂ ಡಾ. ಸುಕನ್ಯ ಮೇರಿ ಮಾರ್ಟಿಸ್ ಕಾರ್ಯನಿರ್ವಹಿಸಿದ್ದರು. ನಾಟಕ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ 8, 2026ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದ್ದು, ಅಂದು ಪ್ರಥಮ ಪ್ರಶಸ್ತಿ ವಿಜೇತ ನಾಟಕದ ಮರುಪ್ರದರ್ಶನವೂ ನಡೆಯಲಿದೆ ಎಂದು ತುಳುಕೂಟ ಉಡುಪಿ (ರಿ.) ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಯದರ್ಶಿ ಗಂಗಾಧರ ಕಿದಿಯೂರು ಹಾಗೂ ಸ್ಪರ್ಧೆಯ ಸಂಚಾಲಕ ಬಿ. ಪ್ರಭಾಕರ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



