ಉಡುಪಿ : ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದ 17 ಶಾಲೆಗಳಲ್ಲಿ ನೀಡಲಾಗುತ್ತಿರುವ ಕಿಶೋರ ಯಕ್ಷಗಾನ ಶಿಕ್ಷಣದ ವಿದ್ಯಾರ್ಥಿಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಡಿಸೆಂಬರ್ 23ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್, ವಂಡ್ಸೆ–ನೆಂಪು ಸಾಂಸ್ಕೃತಿಕ ಸಭಾಭವನದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಗುರುರಾಜ ಗಂಟಿಹೊಳೆಯವರು ಉದ್ಘಾಟಿಸಿ ಮಾತನಾಡಿ, ಪ್ರೌಢ ಶಾಲೆಗಳಲ್ಲಿ ಯಕ್ಷಗಾನ ಶಿಕ್ಷಣ ಅತ್ಯುತ್ತಮ ಯೋಜನೆ. ಇದನ್ನು ಯಕ್ಷಶಿಕ್ಷಣ ಟ್ರಸ್ಟ್ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ದೂರದಿಂದ ಬಂದು ಕಾರ್ಯಕ್ರಮ ಆಯೋಜಿಸುವ ಟ್ರಸ್ಟ್ಗೆ ಆರ್ಥಿಕ ಹೊರೆಯಾಗದಂತೆ ಸಹಕರಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ರಾಜೀವ ಶೆಟ್ಟಿ ಬಿಜ್ರಿ ಅಧ್ಯಕ್ಷತೆ ವಹಿಸಿದ್ದರು. ಪ್ರದರ್ಶನ ಸಂಘಟನಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ನೆಂಪು ಮಾತನಾಡಿ, “ನಮ್ಮ ಶಾಲೆ ಮತ್ತು ಊರಿಗೆ ದೊರೆತ ಅಪೂರ್ವ ಅವಕಾಶ ಇದಾಗಿದೆ. ಇದನ್ನು ಯಶಸ್ವಿಗೊಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ” ಎಂದರು. ಬೆಂಗಳೂರಿನ ಉದ್ಯಮಿ ಮುರಳಿ ಸಾಮ್ಯತಾ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಗಿರೀಶ ನಾಯ್ಕ, ಕರಣ ಪೂಜಾರಿ, ರಘುರಾಮ ಶೆಟ್ಟಿ, ಎಂ. ಗಂಗಾಧರ ರಾವ್, ಗೋಪಾಲ ನಾಯ್ಕ್, ಶಿಲ್ಪಾ ಶೆಟ್ಟಿ, ಶಾಂತಿಸಾಗರ ಶೆಟ್ಟಿ, ಸಂತೋಷ ಕುಮಾರ್ ಶೆಟ್ಟಿ, ಗಣೇಶ ಸೋಮಯಾಜಿ, ಕೃಷ್ಣರಾಜ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಟ್ರಸ್ಟ್ ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಧರ ಭಟ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಚಿತ್ತೂರು ರವಿರಾಜ ಶೆಟ್ಟಿ ನಿರೂಪಿಸಿದರು. ಉಪ್ಪಿನಕುದ್ರು ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ರಾಣಿ ಶಶಿಪ್ರಭೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ ವಿದ್ಯಾರ್ಥಿಗಳಿಂದ ‘ರುಕ್ಮಿಣೀ ಸ್ವಯಂವರ – ರುಗ್ಮಾವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನಗಳು ಪ್ರಸ್ತುತಗೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆದವು.



