ಉಡುಪಿ: ಕೇಂದ್ರದ ಬಿಜೆಪಿ ಸರ್ಕಾರವು ಮತಹಕ್ಕನ್ನು ಕಸಿಯುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶನಿವಾರ ನಗರದಲ್ಲಿ ಮಾನವ ಸರಪಳಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ನಿಕೇತ್ ರಾಜ್ ಮಾರ್ಯ, ಸಂವಿಧಾನವೇ ದೇಶದ ಅಡಿಪಾಯವಾಗಿದ್ದು, ಅದು ಉಳಿಯಬೇಕಾದರೆ ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆಯಬೇಕು. ಮತದಾನವು ನಾಗರಿಕರ ಮೂಲ ಹಕ್ಕಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಹಕ್ಕನ್ನು ಕಸಿಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಜಾತಿ–ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಮೂಲಕ ಸಂವಿಧಾನವನ್ನು ದುರ್ಬಲಗೊಳಿಸಲಾಗುತ್ತಿದೆ ಎಂದರು.


ಚಿಂತಕ ಫಣಿರಾಜ್ ಮಾತನಾಡಿ, ಪ್ರಜಾಪ್ರಭುತ್ವ, ಸಹೋದರತೆ ಮತ್ತು ಸಮಾನತೆ ಉಳಿಯಲು ಸಂವಿಧಾನ ರಕ್ಷಣೆ ಅಗತ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರು ಮಂಜುನಾಥ ಭಂಡಾರಿ, ಐವನ್ ಡಿಸೋಜಾ ಹಾಗೂ ಮುಖಂಡರಾದ ಎಂ.ಎ. ಗಫೂರ್, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಜ್ಯೋತಿ ಹೆಬ್ನಾರ್ ಉಪಸ್ಥಿತರಿದ್ದರು.



