ಉಡುಪಿ: ಕಳೆದುಹೋಗಿದ್ದ ಮೊಬೈಲ್ಗಳನ್ನು ಮರಳಿ ಪಡೆದುಕೊಂಡು ಉಡುಪಿ ನಗರ ಪೊಲೀಸ್ ಠಾಣೆಗೆ ಬಂದ ನಾಗರಿಕರ ಮುಖದಲ್ಲಿ ಇಂದು ಮಂದಹಾಸ ಮೂಡಿದೆ. ನಗರ ಠಾಣೆ ಪೊಲೀಸರು ಮೂರು ತಿಂಗಳ ಅವಧಿಯಲ್ಲಿ ಪತ್ತೆಹಚ್ಚಿದ ಒಟ್ಟು 60 ಮೊಬೈಲ್ಗಳನ್ನು ಅವುಗಳ ನೈಜ ಮಾಲೀಕರಿಗೆ ಹಸ್ತಾಂತರಿಸಿದರು.

ಒಟ್ಟು 8,83,400 ರೂಪಾಯಿ ಮೌಲ್ಯದ ಮೊಬೈಲ್ ಹಸ್ತಾಂತರಿಸಲಾಯಿದೆ. ಮೊಬೈಲ್ ಕಳೆದುಕೊಂಡಿದ್ದವರು ಕೇಂದ್ರ ಸರ್ಕಾರದ ಸಿಎಐಆರ್ ಪೋರ್ಟಲ್ನಲ್ಲಿ ದೂರು ದಾಖಲಿಸಿದ್ದರು. ಸಿಎಐಆರ್ ಪೋರ್ಟಲ್ನಲ್ಲಿ ದಾಖಲಾಗಿದ್ದ ದೂರುಗಳು ಉಡುಪಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರವಾಗಿದ್ದು, ತಾಂತ್ರಿಕ ತನಿಖೆ ಮೂಲಕ ಪೊಲೀಸರು ಮೂರು ತಿಂಗಳ ಅವಧಿಯಲ್ಲಿ 60 ಮೊಬೈಲ್ಗಳನ್ನು ಟ್ರೇಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಪತ್ತೆಹಚ್ಚಿದ ಮೊಬೈಲ್ಗಳನ್ನು ವಶಕ್ಕೆ ಪಡೆದು, ಅಗತ್ಯ ದಾಖಲೆ ಪರಿಶೀಲನೆಯ ಬಳಿಕ ನೈಜ ಮಾಲೀಕರಿಗೆ ಹಸ್ತಾಂತರಿಸಲಾಯಿತು. ಕಷ್ಟಪಟ್ಟು ಇಎಮ್ಐ ಮೂಲಕ ಮೊಬೈಲ್ ಖರೀದಿಸಿದ್ದ ಹಲವರಿಗೆ, ತಿಂಗಳುಗಳ ಬಳಿಕ ತಮ್ಮ ಮೊಬೈಲ್ ಮರಳಿ ದೊರೆತಿದ್ದು ಸಂತಸ ವ್ಯಕ್ತವಾಯಿತು. ಮೊಬೈಲ್ ವಾಪಸ್ಸು ದೊರೆತ ಹಿನ್ನೆಲೆಯಲ್ಲಿ ಹಲವರು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು. ಮೊಬೈಲ್ ಹಸ್ತಾಂತರ ಕಾರ್ಯಕ್ರಮದ ವೇಳೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸಂಭ್ರಮದ ವಾತಾವರಣ ಕಂಡುಬಂತು.

ಈ ಸಂದರ್ಭದಲ್ಲಿ ಮಾತನಾಡಿದ ಉಪ ಪೊಲೀಸ್ ಅಧೀಕ್ಷಕ ಡಿ.ಟಿ. ಪ್ರಭು ಅವರು, ಮೊಬೈಲ್ ಕಳೆದುಕೊಂಡರೆ ಗಾಬರಿಯಾಗದೆ ತಕ್ಷಣ ಸಿಎಐಆರ್ ಪೋರ್ಟಲ್ನಲ್ಲಿ ದೂರು ದಾಖಲಿಸಬೇಕು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು. ಈ ವರ್ಷ ಸಿಎಐಆರ್ ಪೋರ್ಟಲ್ನಲ್ಲಿ ಮೊಬೈಲ್ ಕಳವು ಹಾಗೂ ನಷ್ಟದ ಕುರಿತು ದೂರುಗಳ ಸಂಖ್ಯೆ ಹೆಚ್ಚಾಗಿದ್ದು, ಪೋರ್ಟಲ್ ಮೂಲಕ ದೂರು ನೀಡುವುದರಿಂದ ಮೊಬೈಲ್ ಪತ್ತೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಮೊಬೈಲ್ ಕಳೆದುಕೊಂಡ ಸಂದರ್ಭದಲ್ಲಿಯೇ ತ್ವರಿತವಾಗಿ ದೂರು ದಾಖಲಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.



