ಉಡುಪಿ: ಆನ್‌ಲೈನ್ ಮೂಲಕ ಸಾಲ ಪಡೆದಿದ್ದ ಇಂಜಿನಿಯರ್ ಒಬ್ಬರಿಗೆ ಅಪರಿಚಿತರು ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣ ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸಾಸ್ತಾನದ ನಿವಾಸಿ ರಂಜನ್ ಶೆಟ್ಟಿಗಾರ್ (33) ವಂಚನೆಗೆ ಗುರಿಯಾದವರು.

ರಂಜನ್ ಶೆಟ್ಟಿಗಾರ್ ಅವರು ಬೆಂಗಳೂರಿನಲ್ಲಿ ಆಟೊಮೊಬೈಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಸುಮಾರು ಒಂದು ತಿಂಗಳ ಹಿಂದೆ ಹಣಕಾಸಿನ ಅವಶ್ಯಕತೆಯಿಂದ ತಮ್ಮ ಮೊಬೈಲ್ ಮೂಲಕ ಆನ್‌ಲೈನ್ ಲೋನ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಅಪ್ಲಿಕೇಶನ್ ಪ್ರಕ್ರಿಯೆಯ ವೇಳೆ ಅವರು ಆಧಾರ್ ಕಾರ್ಡ್, ಪಾನ್ ಕಾರ್ಡ್, ಸೆಲ್ಫಿ, ಮೊಬೈಲ್ ಲೊಕೇಶನ್ ಮತ್ತು ಕಾಂಟಾಕ್ಟ್ ವಿವರಗಳನ್ನು ಅಪ್‌ಲೋಡ್ ಮಾಡಿದ್ದರು. ಈ ಮೂಲಕ ಅವರಿಗೆ 12,000 ರೂಪಾಯಿ ಸಾಲ ಮಂಜೂರಾಗಿದ್ದು, ಅವರು ನಿರ್ದಿಷ್ಟ ಅವಧಿಯಾದ 6 ದಿನಗಳ ಒಳಗೆ ಸಂಪೂರ್ಣ ಹಣವನ್ನು ವಾಪಸು ಪಾವತಿಸಿದ್ದರು.

ಆದರೆ ನಂತರ, ಅವರ ಹೆಸರಲ್ಲಿ ಇನ್ನಷ್ಟು ಮೊತ್ತವನ್ನು ಸಾಲವಾಗಿ ತೆಗೆದುಕೊಂಡಿರುವಂತೆ ತೋರಿಸಿ, ಅಪರಿಚಿತರು ವಾಟ್ಸಾಪ್ ಮತ್ತು ಟೆಲಿಗ್ರಾಂ ಮುಖಾಂತರ ಸಂಪರ್ಕಿಸಿ, ಹಣ ಪಾವತಿಸದಿದ್ದರೆ ಅವರ ಮೊಬೈಲ್‌ನಲ್ಲಿರುವ ವೈಯಕ್ತಿಕ ಡೇಟಾ, ಚಿತ್ರಗಳು ಮತ್ತು ಸಂಪರ್ಕ ಸಂಖ್ಯೆಗಳನ್ನೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದು ಎಂದು ಬೆದರಿಕೆ ಹಾಕಿದ್ದಾರೆ. ಭಯಗೊಂಡ ರಂಜನ್ ಶೆಟ್ಟಿಗಾರ್ ಅವರು ಹಂತ ಹಂತವಾಗಿ ಅಪರಾಧಿಗಳ ಒತ್ತಡಕ್ಕೆ ಮಣಿದು, ವಿವಿಧ ದಿನಗಳಲ್ಲಿ ಒಟ್ಟು 4,37,253 ರೂಪಾಯಿ ಮೊತ್ತವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿರುವುದಾಗಿ ದೂರುನಲ್ಲಿ ತಿಳಿಸಿದ್ದಾರೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



