ಉಡುಪಿ: ರಷ್ಯಾ ಅಧ್ಯಕ್ಷರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಷ್ಯಾ ಭಾಷೆಯಲ್ಲಿ ಅನುವಾದಗೊಂಡ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿರುವ ಹಿನ್ನೆಲೆಯಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಅವರು, ರಷ್ಯಾ ಅಧ್ಯಕ್ಷರಿಗೆ ಪ್ರಧಾನಿಯವರು ಭಗವದ್ಗೀತೆ ನೀಡಿರುವುದು ಅತ್ಯಂತ ಸಂತೋಷದ ವಿಷಯ. ಅದು ಕೂಡ ರಷ್ಯಾ ಭಾಷೆಯಲ್ಲಿ ಬರೆದಿರುವುದು ವಿಶೇಷ. ಈ ಜಗತ್ತಿಗೆ ಲಭಿಸಿದ ಅಮೂಲ್ಯ ಗ್ರಂಥ ಭಗವದ್ಗೀತೆ. ಇದಕ್ಕಿಂತ ದೊಡ್ಡ ಉಡುಗೊರೆ ಬೇರೆ ಇಲ್ಲ. ಎಲ್ಲಿಗೆ ಹೋದರೂ ಭಗವದ್ಗೀತೆಯನ್ನೇ ಕೊಡುಗೆಯಾಗಿ ನೀಡುವುದು ಪ್ರಧಾನಿಯವರ ವಿಶಿಷ್ಟ ಪರಂಪರೆ. ಈ ಕಾರಣಕ್ಕೇ ಅವರನ್ನು ಭಾರತ ಭಾಗ್ಯವಿದಾತ ಎಂದು ನಾವು ಕರೆದಿದ್ದೇವೆ. ಅವರಿಗೆ ವಿಶೇಷ ಅಭಿನಂದನೆಗಳು ಎಂದು ಶ್ಲಾಘಿಸಿದರು.


ಭಗವದ್ಗೀತೆಯ ಸಿದ್ಧಾಂತಗಳನ್ನು ಜಗತ್ತಿನ ಆಡಳಿತಗಳು ಅನುಸರಿಸಿದರೆ ಆಡಳಿತ ಸುಗಮವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಯಾವುದೇ ಕೆಲಸ ಮಾಡಿದರೂ ಫಲದ ಮೇಲೆ ಮನಸ್ಸು ಇರಿಸಬಾರದು ಕೆಲಸದ ಮೇಲೆ ಮಾತ್ರ ಗಮನವಿರಬೇಕು, ಇದು ಗೀತೆಯ ಮೂಲ ತತ್ವ. ಈ ಸಂದೇಶ ವ್ಯಾಪಕವಾಗಿ ಪ್ರಚಾರವಾಗಬೇಕು ಎಂದರು. ಪುತ್ತಿಗೆ ಮಠದ ಭಗವದ್ಗೀತೆ ಪ್ರಚಾರ ಕಾರ್ಯವನ್ನು ಪ್ರಧಾನಮಂತ್ರಿ ಮೋದಿ ಹಿಂದೆ ಶ್ಲಾಘಿಸಿದ್ದರು ಎಂಬುದನ್ನು ಅವರು ಈ ಸಂದರ್ಭ ನೆನಪಿಸಿಕೊಂಡರು. ಇತ್ತೀಚೆಗೆ ಕೃಷ್ಣಮಠಕ್ಕೆ ಪ್ರಧಾನಿ ಭೇಟಿ ನೀಡಿದ ಕ್ಷಣವನ್ನೂ ಸ್ಮರಿಸಿದರು.



