ಉಡುಪಿ: ನಗರದಲ್ಲಿ ನಡೆದ ದೊಡ್ಡ ಮಟ್ಟದ ಮನೆ ಕಳ್ಳತನ ಪ್ರಕರಣವನ್ನು ಉಡುಪಿ ನಗರ ಪೊಲೀಸರು ಕ್ಷಿಪ್ರವಾಗಿ ಭೇದಿಸಿ, ಆರೋಪಿಯನ್ನು ಬಂಧಿಸಿ ಕಳವಾದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ. ಕುಕ್ಕೆಹಳ್ಳಿ ಗ್ರಾಮದ ಸುಕೇಶ ನಾಯ್ಕ (37) ಬಂಧಿತ ಆರೋಪಿ.

ನವೆಂಬರ್ 30ರಂದು ಬೆಳಿಗ್ಗೆ 8.30ಕ್ಕೆ ಒಳಕಾಡು, ಬಡಗುಬೆಟ್ಟು ಗ್ರಾಮದ ನಿವಾಸಿ ಶೈಲಾ ವಿಲ್ಹೆಲ್ ಮೀನಾ ಅವರು ಚರ್ಚ್‌ಗೆ ಹೋಗಲು ಚಿನ್ನಾಭರಣ ಧರಿಸಲು ಕಪಾಟು ತೆರೆಯುವಾಗ, ಅಲ್ಲಿ ಇರಿಸಿದ್ದ 548.31 ಗ್ರಾಂ ತೂಕದ ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ಕಳವಾಗಿರುವುದು ಕಂಡು ಬಂದಿದೆ.ಒಟ್ಟು 65,79,720 ರೂಪಾಯಿ ಮೌಲ್ಯದ ಸೊತ್ತು ಕಳವುವಾಗಿರುವ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕುರಿತು ತಂಡ ರಚಿಸಿ ತನಿಖೆ ನಡೆಸಿದ ಪೊಲೀಸ್ ರು ಮಂಗಳವಾರದಂದು ಉಡುಪಿ ನಗರದ ಕಿನಿಮೂಲ್ಕಿ ಹಿರೇನ್ ಬಾರ್ ಬಳಿ ಆರೋಪಿಯನ್ನನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಕಳವಾದ ಚಿನ್ನಾಭರಣವನ್ನು ಅಜ್ಜರಕಾಡು ಪ್ರದೇಶದ ಮನೆಯೊಂದರಲ್ಲಿ ಮುಚ್ಚಿಟ್ಟಿರುವುದಾಗಿ ತಿಳಿಸಿದ ಹಿನ್ನಲೆಯಲ್ಲಿ, ಪೊಲೀಸರು ಅದನ್ನೂ ಪತ್ತೆ ಮಾಡಿ ಒಟ್ಟು 548.31 ಗ್ರಾಂ ಚಿನ್ನ ಮತ್ತು ಮೊಬೈಲ್ ಸೇರಿ 65.79 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ಸುಕೇಶ ನಾಯ್ಕನ ವಿರುದ್ಧ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 11 ಮನೆಕಳ್ಳತನ ಪ್ರಕರಣಗಳು ದಾಖಲಾಗಿವೆ. ಉಡುಪಿ ನಗರ ಠಾಣೆಯಲ್ಲಿ 5 ಪ್ರಕರಣ, 4ರಲ್ಲಿ ಶಿಕ್ಷೆ, ಹಿರಿಯಡ್ಕ ಠಾಣೆಯಲ್ಲಿ 3 ಪ್ರಕರಣ — 1ರಲ್ಲಿ ಶಿಕ್ಷೆ

ಬ್ರಹ್ಮಾವರ ಠಾಣೆಯಲ್ಲಿ 2 ಪ್ರಕರಣ, ಮಣಿಪಾಲ್ ಠಾಣೆಯಲ್ಲಿ 1 ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ನಗರ ಪೊಲೀಸರು ಯಶಸ್ವಿಯಾಗಿ ಪ್ರಕರಣ ಭೇದಿಸಿದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.



