ಉಡುಪಿ : 2018ರಿಂದ 2024ರ ವರಗೆ ಬಾಕಿ ಉಳಿಸಿರುವ ವೇತನ ಮತ್ತು 1.4.2024ರಿಂದ ಜಾರಿಯಾಗಬೇಕಿದ್ದ ಸರಕಾರ ಆದೇಶಿತ ಕನಿಷ್ಠ ಕೂಲಿ ಜಾರಿಗೆ ಆಗ್ರಹಿಸಿ ಡಿ.ಕೆ ಹಾಗೂ ಉಡುಪಿ ಜಿಲ್ಲೆಗಳ ಬೀಡಿ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟದ ಹಿನ್ನೆಲೆ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ವಿಕಾಸ ಸೌಧದಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆಸಿದರು.

ಸಭೆಗೆ ಮಾಲಕರ ಸಂಘದ ಪ್ರತಿನಿಧಿಗಳನ್ನು ಆಹ್ವಾನಿಸಲಾದರೂ ಅವರು ಭಾಗವಹಿಸಲಿಲ್ಲ. ಕಾರ್ಮಿಕರನ್ನು ಪ್ರತಿನಿಧಿಸಿ ಸಭೆಯಲ್ಲಿ ಪಾಲ್ಗೊಂಡ ಸಿಐಟಿಯು ನಾಯಕರು, ಮಾಲಕರು ಸರ್ಕಾರದ ಆದೇಶ ಪಾಲಿಸದೆ ಕಾರ್ಮಿಕರಿಗೆ ವೇತನ ಬಾಕಿ ಇಡುತ್ತಿರುವುದು ಮತ್ತು ಕನಿಷ್ಠ ಕೂಲಿ ವಂಚನೆಯ ಕುರಿತು ವಿವರವಾದ ಅಂಕಿಅಂಶಗಳೊಂದಿಗೆ ಸಚಿವರಿಗೆ ಮನವಿ ಸಲ್ಲಿಸಿದರು. ಸಚಿವರು ಕಾರ್ಮಿಕ ನಾಯಕರಿಂದ ಪಡೆದ ಮಾಹಿತಿಯನ್ನು ಪರಿಶೀಲಿಸಿ, ಅದನ್ನು ಆಧಾರ ಮಾಡಿಕೊಂಡು ಬೀಡಿ ಉದ್ಯಮದ ಸಮಗ್ರ ವಿವರಗಳನ್ನು ಸಂಗ್ರಹಿಸುವಂತೆ ಹಾಗೂ ಮಾಲಕರಿಗೆ ಪತ್ರ ರವಾನಿಸಲು ಅಧಿಕಾರಿಗಳಿಗೆ ಸೂಚಿಸಿದರು. ಡಿಸೆಂಬರ್ ಮಧ್ಯ ಭಾಗದಲ್ಲಿ ಮತ್ತೊಂದು ಉನ್ನತಮಟ್ಟದ ಸಭೆ ನಡೆಸಲು ಸಮಯ ನಿಗದಿ ಮಾಡಲು ಸೂಚನೆಯೂ ನೀಡಿದರು. ಜೊತೆಗೆ ನವೆಂಬರ್ 29ರಂದು ಮಂಗಳೂರಿನಲ್ಲಿ ನಡೆಯುವ ಬೀಡಿ ಕಾರ್ಮಿಕರ ಬೃಹತ್ ಪ್ರತಿಭಟನಾ ಸಭೆಯಲ್ಲಿ ಕಾರ್ಮಿಕರೊಂದಿಗೆ ಸಂವಾದ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಸಿಐಟಿಯು ರಾಜ್ಯ ಅಧ್ಯಕ್ಷ ಕಾಮ್ರೇಡ್ ಮೀನಾಕ್ಷಿ ಸುಂದರಂ, ರಾಜ್ಯ ಫೆಡರೇಶನ್ ಅಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಮುಜೀಬ್, ಸುಕುಮಾರ್ ತೊಕ್ಕೊಟ್ಟು, ಬಿ.ಎಂ. ಭಟ್, ಮುನೀರ್ ಕಾಟಿಪಳ್ಳ, ಕವಿರಾಜ್ ಕಾಂಚನ್ (ಉಡುಪಿ), ಫಾರೂಕ್ ಮಡಂಜೋಡಿ, ಧನಂಜಯ ಪಟ್ರಮೆ ಸೇರಿದಂತೆ ಹಲವು ಕಾರ್ಮಿಕ ನಾಯಕರು ಉಪಸ್ಥಿತರಿದ್ದರು.



