ಉಡುಪಿ : ಕರಾವಳಿ ಪಟ್ಟಣ ಉಡುಪಿಯಲ್ಲಿ ವಾಯು ಗುಣಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಮಾಲಿನ್ಯ ಮಟ್ಟ 80 ಕ್ಕೆ ತಲುಪಿದೆ. ಈ ಪರಿಸ್ಥಿತಿ ಮುಂದುವರಿದರೆ ಉಸಿರಾಡುವಾಗಲೂ ಮಾಸ್ಕ್ ಅಗತ್ಯವಾಗಬಹುದು. ಎಂದು ಪರಿಸರವಾದಿ ಪ್ರೇಮಾನಂದ ಕಲ್ಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಅವರು ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲೆ ಆಯೋಜಿಸಿದ ಪರಿಸರ ಉಳಿಸಿ, ಉಡುಪಿ ಬೆಳೆಸಿ ದುಂಡುಮೇಜಿನ ಸಂವಾದದಲ್ಲಿ ಮಾತನಾಡಿ, ಹೆಚ್ಚುತ್ತಿರುವ ತ್ಯಾಜ್ಯ, ಅರಣ್ಯ ನಾಶ, ಮೀನು ಇಳುವರಿ ಕುಸಿತ ಮತ್ತು ಅತಿಯಾದ ಅಭಿವೃದ್ಧಿ ಯೋಜನೆಗಳು ಉಡುಪಿ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ರೆಸಾರ್ಟ್‌ಗಳ ಅತಿವೃದ್ಧಿ ಹಾಗೂ ಸಿಆರ್ ಝಡ್ ೩ರಿಂದ ಸಿಆರ್ ಝಡ್ ೨ ಗೆ ಬದಲಾವಣೆಯಾದ ನಿಯಮಗಳು ಕರಾವಳಿ ಪರಿಸರಕ್ಕೆ ಅಪಾಯ ಉಂಟುಮಾಡುತ್ತಿವೆ. ಬಾವಿಗಳ ಸಿಹಿನೀರು ಉಪ್ಪುನೀರಿನ ಒತ್ತಡದಿಂದ ಹಾನಿಯಾಗುವ ಸಾಧ್ಯತೆ ಹೆಚ್ಚುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರವಾಗಬಹುದು. ಕೊಡಚಾದ್ರಿ ಕೇಬಲ್ ಕಾರು ಸೇರಿದಂತೆ ಅನೇಕ ಯೋಜನೆಗಳು ಪರಿಸರ ಸುಸ್ಥಿರತೆಗೆ ವಿರುದ್ಧವಾಗಿವೆ. ಗ್ರಾಮದಿಂದ ಪುರಸಭೆ ಮಟ್ಟದವರೆಗೆ ಸೂಕ್ಷ್ಮ ಪರಿಸರ ಯೋಜನೆಗಳು ಅಗತ್ಯವಿದ್ದು, ಎಲ್ಲರೂ ಒಟ್ಟಾಗಿ ಕಾರ್ಯತಂತ್ರ ರೂಪಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಸಂಚಾಲಕರಾದ ನಿಹಾಲ್ ಕಿದಿಯೂರು ಮಾತನಾಡಿ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಡಾ. ಅಬ್ದುಲ್ ಅಝೀಜ್ ಉಡುಪಿಯ ಸ್ಥಳೀಯ ಪರಿಸರ ಸಮಸ್ಯೆಗಳ ಕುರಿತು ತಮ್ಮ ವಿಶ್ಲೇಷಣೆಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಮಾನವೀಯ ಸೇವೆಗೈಯುತ್ತಿರುವ ನಿತ್ಯಾನಂದ ಒಳಕಾಡು, ಸಂತೋಷ್ ಕೆಮ್ಮಣ್ಣು ಮತ್ತು ನಮನ ಶ್ರೀ ಅವರನ್ನು ಸನ್ಮಾನಿಸಲಾಯಿತು.

ಜಮಾಅತೆ ಇಸ್ಲಾಮಿ ಹಿಂದ್ ಅವರ ರಾಷ್ಟ್ರೀಯ ಮಟ್ಟದ ಆದರ್ಶ ನೆರೆಹೊರೆ ಅಭಿಯಾನದ ಭಾಗವಾಗಿ ಈ ಚರ್ಚೆ ಜರುಗಿತು. ಕಾರ್ಯಕ್ರಮದಲ್ಲಿ ಮೋಹನ್ ಕುಮಾರ್, ಸಾಹೀಲ್ ಸಂವರ್ತ್, ಅಫ್ವಾನ್ ಹೂಡೆ, ಇದ್ರಿಸ್ ಹೂಡೆ, ಸಿರಾಜ್ ಮಲ್ಪೆ, ನಿಸಾರ್ ಉಡುಪಿ, ಅನ್ವರ್ ಅಲಿ ಕಾಪು, ಸಮೀರ್ ತೀರ್ಥಹಳ್ಳಿ ಮತ್ತು ಎಪಿಸಿಆರ್ ರಾಜ್ಯ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.



