ಉಡುಪಿ : ಜಿಲ್ಲೆಯಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲಾದ ದೌರ್ಜನ್ಯ ಪ್ರಕರಣಗಳಿಗೆ ತಕ್ಷಣ ಸ್ಪಂದಿಸಿ, ಸಂಬಂಧಿತ ಕಾನೂನು ಕ್ರಮಗಳ ಕುರಿತು ತಳಮಟ್ಟದಲ್ಲಿಯೇ ಅರಿವು ಮೂಡಿಸುವ ಮೂಲಕ ಇಂತಹ ಪ್ರಕರಣಗಳನ್ನು ಗಣನೀಯವಾಗಿ ಕಡಿಮೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಮಣಿಪಾಲದಲ್ಲಿರುವ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸಖಿ ಒನ್ ಸ್ಟಾಪ್ ಹಾಗೂ ಸಾಂತ್ವನ ಕೇಂದ್ರಗಳಲ್ಲಿ ವರ್ಷಗಳಿಂದ ಬಾಕಿ ಉಳಿದಿರುವ ದೌರ್ಜನ್ಯ ಪ್ರಕರಣಗಳನ್ನು ವೈಯಕ್ತಿಕವಾಗಿ ಪರಿಶೀಲಿಸಿ ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಹದಿಹರೆಯದ ಬಾಲಕಿಯರು ಮತ್ತು ಮಹಿಳೆಯರಲ್ಲಿ ರಕ್ತಹೀನತೆ ಪ್ರಮಾಣ ಹೆಚ್ಚಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿಗಳು, ಪೌಷ್ಟಿಕಾಂಶಯುಕ್ತ ಆಹಾರ ಸೇವನೆಗೆ ಪ್ರೋತ್ಸಾಹಿಸುವ ಜಾಗೃತಿ ಅಭಿಯಾನ ನಡೆಯಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಮನು ಪಟೇಲ್, ಸಖಿ ಮತ್ತು ಸಾಂತ್ವನ ಕೇಂದ್ರಗಳಲ್ಲಿ ಹೆಚ್ಚು ಕಾಲ ಪ್ರಕರಣಗಳನ್ನು ಉಳಿಸದೆ ಅವನ್ನು ಕಾನೂನು ಸೇವಾ ಪ್ರಾಧಿಕಾರಕ್ಕೆ ವರ್ಗಾಯಿಸಲು ಸೂಚಿಸಿದರು. ಮಹಿಳಾ ಮಂಡಳದ ಒಕ್ಕೂಟದ ಅಧ್ಯಕ್ಷೆ ವಸಂತಿ ಕೊರಡ್ಕಲ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಪುರುಷರೂ ತಮ್ಮ ಕುಟುಂಬ ಸಮಸ್ಯೆಗಳನ್ನು ಹಂಚಿಕೊಳ್ಳಲು ಮುಂದಾಗುತ್ತಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.

ಸಖಿ ಒನ್ ಸ್ಟಾಪ್ ಕೇಂದ್ರದಲ್ಲಿ ಅಕ್ಟೋಬರ್ ವರೆಗೆ ಒಟ್ಟು 180 ಪ್ರಕರಣಗಳು ದಾಖಲಾಗಿದ್ದು, 121 ಪ್ರಕರಣಗಳು ಇತ್ಯರ್ಥಗೊಂಡಿವೆ. 20 ನ್ಯಾಯಾಲಯದಲ್ಲಿ, 8 ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ, 9 ಕಾನೂನು ಸಮಾಲೋಚನೆಯಲ್ಲಿ ಹಾಗೂ 22 ಪ್ರಕರಣಗಳು ಆಪ್ತಸಮಾಲೋಚನೆಯಲ್ಲಿ ಬಾಕಿ ಉಳಿದಿವೆ.
ಸ್ವರೂಪ ಟಿ.ಕೆ (ಜಿಲ್ಲಾಧಿಕಾರಿ)



