ಉಡುಪಿ : ಬಂದರು ಇಲಾಖೆಯ ಮಲ್ಪೆಯ 9 ಎಕರೆ ಜಾಗವನ್ನು ಮೀನು ಮಾರಾಟ ಫೆಡರೇಶನ್ ಗೆ ಗುತ್ತಿಗೆ ಆಧಾರದಲ್ಲಿ ನೀಡಿರುವ ನಿರ್ಧಾರವನ್ನು ಕೂಡಲೇ ರದ್ದುಪಡಿಸುವಂತೆ ಮಲ್ಪೆ ಹನುಮಾನ್ ನಗರದ ಶ್ರೀ ಹನುಮಾನ್ ವಿಠೋಬಾ ಭಜನಾ ಮಂದಿರದ ಸದಸ್ಯರು ಆಗ್ರಹಿಸಿದ್ದಾರೆ. ಗುತ್ತಿಗೆ ಹಿಂಪಡೆಯದಿದ್ದರೆ ಹೋರಾಟಕ್ಕೆ ತಯಾರು ಎಂದು ಅವರು ಎಚ್ಚರಿಸಿದ್ದಾರೆ.

ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂದಿರದ ಪ್ರಮುಖ ಧನಂಜಯ ಕಾಂಚನ್ ಅವರು, ಮಲ್ಪೆ ಸೀವಾಕ್ ಜಟ್ಟಿಯಿಂದ ಬಾಲಕರ ಶ್ರೀರಾಮ ಭಜನಾ ಮಂದಿರದವರೆಗೆ ಹರಡುವ 9 ಎಕರೆ ಜಾಗವನ್ನು ಫೆಡರೇಶನ್‌ಗೆ ಗುತ್ತಿಗೆ ಆಧಾರದಲ್ಲಿ ಮಂಜೂರು ಮಾಡಿರುವುದು ಗಂಭೀರ ವಿಷಯ. ಫೆಡರೇಶನ್ ಮಂಡಳಿಯೊಳಗೆ ಯಾವುದೇ ಚರ್ಚೆ ನಡೆಯದೆ, ಅಧ್ಯಕ್ಷರಾಗಿರುವ ಶಾಸಕ ಯಶ್ಪಾಲ್ ಸುವರ್ಣ ಅವರ ವೈಯಕ್ತಿಕ ಆಸಕ್ತಿಯಿಂದ ಈ ಜಾಗವನ್ನು ಪಡೆಯಲಾಗಿದ್ದು, ಮುಂದೆ ಜಲಕ್ರೀಡೆ, ಹೋಮ್‌ಸ್ಟೇ ಸೇರಿದಂತೆ ವಾಣಿಜ್ಯ ಚಟುವಟಿಕೆ ಆರಂಭಿಸಲು ಯೋಜನೆ ಮಾಡಿದ್ದಾರೆ. ಈ ಯೋಜನೆಗೆ ಇಲ್ಲಿನ ಐದು ಭಜನಾ ಮಂದಿರಗಳ ವಿರೋಧವಿದೆ. ವಿಷಯ ತಿಳಿದು ಶಾಸಕರ ಮನೆಗೆ ಹೋಗಿ ವಿಚಾರಿಸಿದಾಗ, ಮಂದಿರಕ್ಕೆ ತೊಂದರೆ ಆಗುವ ಕಾರಣದಿಂದ ಯೋಜನೆ ಕೈಬಿಡಲು ಸಿದ್ಧ ಎಂದು ಹೇಳಿದ್ದರು. ಈಗ ಮತ್ತೆ ಮಂದಿರದ ಎದುರಿನ ಜಾಗ ಬಿಟ್ಟು ಉಳಿದ ಜಾಗವನ್ನು ಪಡೆಯುವುದಾಗಿ ಹೊಸ ಹೇಳಿಕೆ ನೀಡುತ್ತಿರುವುದು ಗೊಂದಲ ಸೃಷ್ಟಿಸಿದೆ” ಎಂದು ಕಾಂಚನ್ ಆಕ್ಷೇಪಿಸಿದರು.

ನಮ್ಮ ಬೇಡಿಕೆ ಕೇವಲ ಮಂದಿರದ ಎದುರಿನ ಜಾಗವಲ್ಲ; ಎಲ್ಲ 9 ಎಕರೆ ಜಾಗಕ್ಕೂ ನೀಡಿರುವ ಗುತ್ತಿಗೆ ಆದೇಶವನ್ನು ಸಂಪೂರ್ಣ ಹಿಂಪಡೆಯಬೇಕು. ಮೀನುಗಾರಿಕೆ ಚಟುವಟಿಕೆ ನಡೆಸುವುದಾದರೆ, ಅದನ್ನು ಮೀನುಗಾರಿಕೆ ಇಲಾಖೆ ಮಾಡಬಹುದಾದರೆ, ಫೆಡರೇಶನ್‌ಗೆ ನೀಡುವ ಅಗತ್ಯವೇನು? ಮಂದಿರದ ಎದುರು ಇರುವ ರಂಗ ಮಂಟಪದಲ್ಲಿ ನಿರಂತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ವರ್ಷಗಳಿಂದ ಮಂದಿರ ಆಯೋಜಿಸುವ ಆಟೋಟ ಸ್ಪರ್ಧೆಗಳೂ ಇದೇ ಜಾಗದಲ್ಲಿ ನಡೆಯುತ್ತಿವೆ. ಈ ಜಾಗ ಮುಂದಿನ ಪೀಳಿಗೆಗೆ ಉಳಿಯಬೇಕು; ಖಾಸಗೀಕರಣವನ್ನು ಯಾವುದಕ್ಕೂ ಅನುಮತಿಸಬಾರದು. ಕಳೆದ ದಿನಗಳಲ್ಲಿ ನಮ್ಮ ಸದಸ್ಯರಿಗೆ ಕೆಲವರು ದೂರವಾಣಿ ಮೂಲಕ ಬೆದರಿಕೆ ಹಾಕಿದ್ದಾರೆ. ಇದರ ಬಗ್ಗೆ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಬೆದರಿಕೆಗೂ ಜಗ್ಗುವುದಿಲ್ಲ; ಹೋರಾಟದಲ್ಲಿ ಜೀವವನ್ನೇ ಕೊಡಲು ಸಿದ್ಧ ಎಂದರು.

ಸುದ್ದಿಗೋಷ್ಠಿಯಲ್ಲಿ ಮಂದಿರದ ಅಧ್ಯಕ್ಷ ಸತೀಶ್ ಬಂಗೇರ, ಪ್ರಮುಖರಾದ ಸುರೇಶ್ ಸಾಲ್ಯಾನ್, ಶೇಖರ್ ಪುತ್ರನ್, ವಿಜಯ ಸುವರ್ಣ, ಸುಂದರ್ ಸಾಲ್ಯಾನ್, ತುಕರಾಂ ಮೈಂದನ್, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಕಾಂಚನ್ ಉಪಸ್ಥಿತರಿದ್ದರು.



