ಉಡುಪಿ : ಕಟೀಲು ದುರ್ಗಾಪರಮೇಶ್ವರಿ ದೇವಳದ ಯಕ್ಷಗಾನ ತಿರುಗಾಟದ ಏಳನೇ ಮೇಳದ ಉದ್ಘಾಟನೆ ಮತ್ತು ಸೇವೆಯಾಟದ ಆರಂಭ ಕಾರ್ಯಕ್ರಮ ಕಟೀಲು ಶ್ರೀಕ್ಷೇತ್ರದಲ್ಲಿ ಭಕ್ತಿಪೂರ್ಣವಾಗಿ ಜರಗಿತು. ಈ ಸಂದರ್ಭದಲ್ಲಿ ಯಕ್ಷಗಾನ ಸೇವೆ ಮತ್ತು ಸಾಮಾಜಿಕ ಕಳಕಳಿಯ ಕೈಂಕರ್ಯಕ್ಕಾಗಿ ಉಡುಪಿಯ ‘ಯಕ್ಷಗಾನ ಕಲಾರಂಗ’ ಸಂಸ್ಥೆಗೆ ದೇವಳದಿಂದ ಗೌರವಾರ್ಥ ‘ಶ್ರೀ ದುರ್ಗಾನುಗ್ರಹ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪಲಿಮಾರು ಮಠಾಧೀಶ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾರಂಗವು ಕಳೆದ ಐದು ದಶಕಗಳಿಂದ ಮೌನವಾಗಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದು, ಕಲಾವಿದರ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಹೆಸರಾಗಿರುವ ಹಿನ್ನಲೆಯಲ್ಲಿ ಸನ್ಮಾನ ಪತ್ರ ಮತ್ತು 25,000 ರೂಪಾಯಿಗಳನ್ನು ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರಿಗೆ ಹಸ್ತಾಂತರಿಸುವ ಮೂಲಕ ಗೌರವ ಪ್ರದಾನ ಮಾಡಲಾಯಿತು.

ದೇವಳದ ಮೊಕ್ತೇಸರ ಕೊಡೆತ್ತೂರು ಗುತ್ತು ಸನತ್ ಕುಮಾರ್ ಶೆಟ್ಟಿ, ಏಳು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಅನುವಂಶಿಕ ಮೊಕ್ತೇಸರುಗಳಾದ ವಾಸುದೇವ ಅಸ್ರಣ್ಣ ಮತ್ತು ಸಹೋದರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ . ಭಟ್, ಪಿ. ಕಿಶನ್ ಹೆಗ್ಡೆ, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ್, ಸದಸ್ಯರಾದ ಎಸ್. ಗಣರಾಜ ಭಟ್, ಸಂತೋಷ ಕುಮಾರ ಶೆಟ್ಟಿ, ಕಿಶೋರ ಸಿ. ಉದ್ಯಾವರ, ಡಾ. ಪೃಥ್ವಿರಾಜ ಕವತ್ತಾರು, ಎಚ್. ಎನ್. ವೆಂಕಟೇಶ ಉಪಸ್ಥಿತರಿದ್ದರು.



