ಉಡುಪಿ : ನೀಲಾವರ ಗ್ರಾಮ ಪಂಚಾಯತ್ ಸಭಾಭವನದಲ್ಲಿ 2025-26ನೇ ಸಾಲಿನ ಗ್ರಾಮ ಸಭೆ ಇಂದು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ. ಬೇಬಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಮಾತನಾಡಿದ ನೋಡಲ್ ಅಧಿಕಾರಿ ಶ್ರೀಮತಿ ವಿಜಯ ನಾಯ್ಕ ಅವರು, ಸರ್ಕಾರದಿಂದ ಲಭ್ಯವಿರುವ ವಿವಿಧ ಸೌಲಭ್ಯಗಳು ಗ್ರಾಮದಲ್ಲಿನ ಪ್ರತಿ ಹಕ್ಕುದಾರನಿಗೂ ಸಮನಾಗಿ ತಲುಪಬೇಕು ಎಂದು ತಿಳಿಸಿ, ಅದರ ಕಾರ್ಯಗತಗೊಳಿಕೆಯಲ್ಲಿ ಗ್ರಾಮಸಭೆಯ ಮಹತ್ವವನ್ನು ಒತ್ತಿ ಹೇಳಿದರು.

ಸಭೆಯಲ್ಲಿ ಕೃಷಿ, ಆರೋಗ್ಯ, ಪಶುಸಂಗೋಪನೆ, ತೋಟಗಾರಿಕೆ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜೊತೆಗೆ ರೂಡ್ಸೆಟ್ ಹಾಗೂ ಎಸ್ ಡಿಎಂ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ, ಯೋಜನೆಗಳು ಮತ್ತು ನವೀನ ಕಾರ್ಯಕ್ರಮಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪೌತಿ ಖಾತಾ ಅಭಿಯಾನ, ಎಸ್ ಎಲ್ ಆರ್ ಎಂ ನಿರ್ವಹಣೆ ಕುರಿತಾಗಿ ಚರ್ಚೆ ನಡೆಯಿತು.

ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಘಟಕ, ಹಾಗೂ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ ಶ್ಯಾನುಭಾಗ್ ಸಭೆಗೆ ಸ್ವಾಗತ ಕೋರಿದರು. ಎಸ್ ಡಿಎಎ ಕಾರ್ಯಕ್ರಮವನ್ನು ನಿರೂಪಿಸಿದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸಿ, ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಸಭೆಯ ಮುಂದಿಡಲಾಯಿತು.



